ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರಕಾರ ಹಾಗು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಡುವಿನ ಕದನ ಸುಪ್ರೀಂ ಕೋರ್ಟ್ ಅಂಗಳಕ್ಕೆ ಬಂದು ಬಿದ್ದಿದೆ.
ದೆಹಲಿ ಸರ್ಕಾರದ ಆಡಳಿತದ ಮೇಲೆ ಕೇಂದ್ರಕ್ಕೆ ಅಧಿಕಾರ ಹೊಂದಿರುವ ಸುಗ್ರೀವಾಜ್ಞೆ ವಿರುದ್ಧ ಆಮ್ ಆದ್ಮಿ ಪಾರ್ಟಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕೇಂದ್ರದ ಸುಗ್ರೀವಾಜ್ಞೆ ಅಸಂವಿಧಾನಿಕವಾಗಿದೆ. ಸಂವಿಧಾನದ ಆರ್ಟಿಕಲ್ 239ಎಎ ಪರಿಚ್ಚೇದದ ತಿದ್ದುಪಡಿ ಮಾಡದೇ, ಚುನಾಯಿತ ಸರ್ಕಾರದ ಅಧಿಕಾರದ ನಿಯಂತ್ರಣವನ್ನು ಕಸಿದುಕೊಳ್ಳುವ ಪ್ರಯತ್ನ ಇದಾಗಿದೆ. ದೆಹಲಿ ಆಡಳಿತವನ್ನು ಚುನಾಯಿತರಲ್ಲದ ಲೆಫ್ಟಿನೆಂಟ್ ಗರ್ವನರ್ ಪರಿಧಿಗೆ ಒಳಪಡಿಸುವುದು ಅಸಂವಿಧಾನಿಕವಾಗಿದೆ. ಹೀಗಾಗಿ ದೆಹಲಿ ಸುಗ್ರೀವಾಜ್ಞೆ ಜಾರಿಗೆ ತಡೆ ನೀಡಬೇಕು ಎಂದು ಕೋರಿ ಆಮ್ ಆದ್ಮಿ ಪಾರ್ಟಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಮೇ 19 ರಂದು ದೆಹಲಿಯಲ್ಲಿ ಐಎಎಸ್ ಸೇರಿದಂತೆ ಹಲವು ಅಧಿಕಾರಿಗಳ ವರ್ಗಾವಣೆ, ಅಧಿಕಾರವನ್ನು ನೀಡುವ ಕುರಿತು ಸುಗ್ರೀವಾಜ್ಞೆಯನ್ನು ಕೇಂದ್ರ ಪ್ರಕಟಿಸಿತ್ತು. ಈ ನಿರ್ಧಾರವನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ವಿರೋಧಿಸಿತ್ತು.
ದೆಹಲಿಯಲ್ಲಿ ಸಚಿವರಿಗಿಂತ ಅಧಿಕಾರಿಗಳೆ ಉನ್ನತ ಸ್ಥಾನ ಹೊಂದಿರುತ್ತಾರೆ. ಮಂತ್ರಿಗಳು ತೆಗದುಕೊಂಡ ನಿರ್ಧಾರವನ್ನು ಅಧಿಕಾರಿಗಳು ವಜಾ ಮಾಡುತ್ತಾರೆ. ಇದು ಚುನಾಯಿತ ಸರ್ಕಾರದ ಕೈಗಳನ್ನು ಕಟ್ಟಿಹಾಕಿದಂತೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಈ ನಿರ್ಧಾರದ ವಿರುದ್ಧ ಕೇಜ್ರಿವಾಲ್ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ನಾಯಕರನ್ನು ಬೇಟಿ ಮಾಡಿ ಬೆಂಬಲ ಕೋರಿದ್ದರು. ಆದರೆ ಕಾಂಗ್ರೆಸ್ ಸ್ಪಷ್ಟ ನಿರ್ಧಾರ ತಿಳಿಸಿಲ್ಲ. ಇತರ ಕೆಲ ಪಕ್ಷಗಳು ಕೇಜ್ರಿವಾಲ್‌ಗೆ ಬೆಂಬಲ ಸೂಚಿಸಿದೆ.