ಹೊಸದಿಗಂತ ವರದಿ ಮಂಡ್ಯ:
ಆರೋಗ್ಯದ ಹಿತದೃಷ್ಟಿಯಿಂದ ಸಾವಯವ ಬೆಲ್ಲವನ್ನು ಬಳಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿ ಎಂದು ವಿ.ಸಿ ಫಾರಂ ಬೆಲ್ಲದ ಪಾರ್ಕ್‌ನ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಕೇಶವಯ್ಯ ತಿಳಿಸಿದರು.
ನಾಡಹಬ್ಬ ಶ್ರೀರಂಗಪಟ್ಟಣ ದಸರಾ ಮೂರನೇ ದಿನದ ಅಂಗವಾಗಿ ಶ್ರೀರಂಗಪಟ್ಟಣ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ರೈತ ದಸರಾ ಕಾರ‌್ಯಕ್ರಮದಲ್ಲಿ ನಡೆದ ಕಿಸಾನ್ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಬೆಲ್ಲವನ್ನು ಔಷಧಿಯಾಗಿ, ಆಹಾರಕ್ಕಾಗಿ ಶತಮಾನಗಳಿಂದಲೂ ಬಳಸಲಾಗುತ್ತಿದೆ. ಖಾದ್ಯವನ್ನು ಸಿಹಿಯಾಗಿಸುವುದಲ್ಲದೆ ಆರೋಗ್ಯವನ್ನು ಕೂಡ ಸಿಹಿಯಾಗಿಸುತ್ತದೆ. ಬೆಲ್ಲವು ತೂಕವನ್ನು ಇಳಿಸಿಕೊಳ್ಳಲು, ಹೊಟ್ಟೆಯ ಸಮಸ್ಯೆಯನ್ನು ಶಮನ ಮಾಡಿಕೊಳ್ಳಲು ಬಳಸಲಾಗುತ್ತದೆ. ಇದರಲ್ಲಿರುವ ಪೌಷ್ಟಿಕ ಸತ್ವಗಳು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ವಿವರಿಸಿದರು.
ರಕ್ತ ಮತ್ತು ಶ್ವಾಸಕೋಶವನ್ನು ನಿರ್ವಿಷಗೊಳಿಸುವುದಲ್ಲದೆ, ಶ್ವಾಸಕೋಶದ ದಕ್ಷತೆಯನ್ನು ಹೆಚ್ಚಿಸುತ್ತದೆ. ಬೆಲ್ಲ ವಿಶೇಷವಾಗಿ ಉಸಿರಾಟದ ಸಮಸ್ಯೆಗಳ ತಡೆಗಟ್ಟಲು ಸಾಕಷ್ಟು ಪ್ರಯೋಜನಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವುದರಿಂದ ಮಧುಮೇಹ ಹೊಂದಿರುವವರು ಸಕ್ಕರೆಯ ಬದಲಾಗಿ ಬೆಲ್ಲವನ್ನು ಸೇವನೆ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.