Monday, November 17, 2025

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರು ನಮ್ಮ ಕ್ಯಾಪ್ಟನ್: 2ನೇ ಟೆಸ್ಟ್ ಆಡ್ತಾರಾ? ಏನ್ ಕಥೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯದ ವೇಳೆ ಕುತ್ತಿಗೆ ನೋವು ಕಾಣಿಸಿಕೊಂಡಿದ್ದ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಅವರನ್ನು ತುರ್ತುವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡನೇ ದಿನ ಬ್ಯಾಟಿಂಗ್ ಸಮಯದಲ್ಲೇ ಗಿಲ್ ತೀವ್ರ ಅಸ್ವಸ್ಥತೆ ಅನುಭವಿಸಿದ್ದರು. ಶನಿವಾರ ಅವರನ್ನು ವುಡ್ಲ್ಯಾಂಡ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಇದೀಗ ಗಿಲ್ ಡಿಸ್ಚಾರ್ಜ್ ಆಗಿದ್ದರೂ, 4-5 ದಿನಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸೌರವ್ ಗಂಗೂಲಿ ಆಸ್ಪತ್ರೆಯಲ್ಲಿ ಗಿಲ್ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದರು. ವರದಿಗಳ ಪ್ರಕಾರ, ಗಿಲ್ ಅವರ ನೋವು ಈಗ ಉಲ್ಬಣಗೊಂಡಿಲ್ಲ ಮತ್ತು ಚಿಕಿತ್ಸೆ ಫಲಕಾರಿಯಾಗಿದೆ. ಆದರೆ, ಅವರಿಗೆ ನೀಡಿರುವ ವಿಶ್ರಾಂತಿ ಅವಧಿಯಿಂದಾಗಿ ನವೆಂಬರ್ 22 ರಂದು ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಅವರ ಪಾಲ್ಗೊಳ್ಳುವಿಕೆ ಇನ್ನೂ ಸ್ಪಷ್ಟವಾಗಿಲ್ಲ.

ಮೊದಲ ಟೆಸ್ಟ್‌ನಲ್ಲಿ ಗಿಲ್ ಅನುಪಸ್ಥಿತಿ ಭಾರತದ ಬ್ಯಾಟಿಂಗ್ ಕ್ರಮದ ಮೇಲೆ ದೊಡ್ಡ ಪರಿಣಾಮ ಬೀರಿತು. ಎರಡೂ ಇನ್ನಿಂಗ್ಸ್‌ಗಳಲ್ಲಿ ಕೇವಲ 9 ವಿಕೆಟ್‌ಗಳನ್ನು ಕಳೆದುಕೊಂಡರೂ ಭಾರತ ಆಲೌಟ್‌ ಆಗಿದ್ದು ಗಮನಾರ್ಹ. ಈ ನಡುವೆ, ದಕ್ಷಿಣ ಆಫ್ರಿಕಾ ನೀಡಿದ್ದ 124 ರನ್‌ಗಳ ಸಣ್ಣ ಗುರಿಯನ್ನು ಬೆನ್ನಟ್ಟುವಲ್ಲಿ ಭಾರತ ವಿಫಲವಾಯಿತು. ತವರು ನೆಲದಲ್ಲಿ ಇಷ್ಟು ಸಣ್ಣ ಗುರಿ ಎದುರು ಭಾರತ ತಂಡ ಇದೇ ಮೊದಲು ಸೋಲು ಕಂಡಿದೆ.

ಗಿಲ್ ಆರೋಗ್ಯ ಸುಧಾರಿಸುತ್ತಿದ್ದರೂ, ತಂಡಕ್ಕೆ ಅತ್ಯಂತ ಮುಖ್ಯ ಆಟಗಾರರಾದ ಅವರ ಗೈರುಹಾಜರಾತಿ ಎರಡನೇ ಟೆಸ್ಟ್‌ಗೂ ಮುಂದುವರಿಯಬಹುದೇ ಎಂಬ ಕುತೂಹಲ ಈಗ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಿದೆ.

error: Content is protected !!