ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ಜತೆ ವಿಲೀನ ಮಾಡುವುದು ನಮ್ಮ ಬದ್ಧತೆ: ಅಮಿತ್‌ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಆಕ್ರಮಿತ ಕಾಶ್ಮೀರವು ಎಂದಿಗೂ ಭಾರತದ್ದೇ. ಅದನ್ನು ಭಾರತದ ಜತೆ ವಿಲೀನಗೊಳಿಸುವುದು ನಮ್ಮ ಬದ್ಧತೆಯಾಗಿದೆ ಎಂದು ಅಮಿತ್‌ ಶಾ (Amit Shah) ಪುನರುಚ್ಚರಿಸಿದ್ದಾರೆ.

ಎಎನ್‌ಐ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ ಅವರು, ಪಾಕ್‌ ಆಕ್ರಮಿತ ಕಾಶ್ಮೀರವು ಭಾರತದ ಜತೆ ವಿಲೀನವಾಗಬೇಕು ಎಂಬುದು ಬಿಜೆಪಿ ಮಾತ್ರವಲ್ಲ, ಅದು ದೇಶದ, ಸಂವಿಧಾನದ ಬದ್ಧತೆಯಾಗಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ಭಾರತದ ಹಕ್ಕಿದೆ. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಅದನ್ನು ಹೇಗೆ ಭಾರತದ ಜತೆ ವಿಲೀನಗೊಳಿಸಬೇಕು ಎಂಬುದೇ ನಮ್ಮ ಮುಂದಿರುವ ಪ್ರಶ್ನೆಯಾಗಿದೆ ಎಂದು ತಿಳಿಸಿದರು.

ಫಾರೂಕ್‌ ಅಬ್ದುಲ್ಲಾಗೆ ಚಾಟಿ
ಪಾಕಿಸ್ತಾನವನ್ನು ಗೌರವಿಸಬೇಕು ಎಂದು ಹೇಳಿದ ಫಾರೂಕ್‌ ಅಬ್ದುಲ್ಲಾ ಅವರಿಗೆ ತಿರುಗೇಟು ನೀಡಿದ ಅಮಿತ್‌ ಶಾ, ಪಾಕಿಸ್ತಾನ ಅಣುಬಾಂಬ್‌ ಹೊಂದಿದೆ. ಅದಕ್ಕೆ ಭಾರತ ಗೌರವ ನೀಡಬೇಕು ಎಂಬುದಾಗಿ ಫಾರೂಕ್‌ ಅಬ್ದುಲ್ಲಾ ಹಾಗೂ ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಅದರೆ, ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವ, 130 ಕೋಟಿ ಜನಸಂಖ್ಯೆಯ ಭಾರತವು ತನ್ನ ಹಕ್ಕನ್ನು ಪ್ರತಿಪಾದಿಸಲು ಪಾಕಿಸ್ತಾನಕ್ಕೆ ಹೆದರಬೇಕೇ? ರಾಹುಲ್‌ ಗಾಂಧಿ ಅವರು ಇದಕ್ಕೆ ಉತ್ತರ ನೀಡಬೇಕು. ಪಾಕಿಸ್ತಾನವನ್ನು ಗೌರವಿಸಬೇಕಾ? ಪಾಕ್‌ ಆಕ್ರಮಿತ ಕಾಶ್ಮೀರವನ್ನು ಬಿಟ್ಟುಕೊಡಬೇಕಾ ಎಂಬುದರ ಕುರಿತು ರಾಹುಲ್‌ ಗಾಂಧಿ ಉತ್ತರಿಸಲಿ ಎಂದರು.

2029ರವರೆಗೂ ಮೋದಿಯೇ ಪ್ರಧಾನಿ
ನರೇಂದ್ರ ಮೋದಿ ಅವರು 75 ವರ್ಷ ದಾಟಿದ ಬಳಿಕ ಪ್ರಧಾನಿ ಸ್ಥಾನದಲ್ಲಿ ಮುಂದುವರಿಯಲ್ಲ ಎಂಬ ಕೇಜ್ರಿವಾಲ್‌ ನೀಡಿದ ಹೇಳಿಕೆಗೆ ಅಮಿತ್‌ ಶಾ ಪ್ರತಿಕ್ರಿಯಿಸಿದ್ದು, ಆಮ್‌ ಆದ್ಮಿ ಪಕ್ಷವು ದೇಶಾದ್ಯಂತ ಕೇವಲ 22 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಹಾಗಾಗಿ, ಅರವಿಂದ್‌ ಕೇಜ್ರಿವಾಲ್‌ ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ನರೇಂದ್ರ ಮೋದಿ ಅವರು 2029ರವರೆಗೂ ಪ್ರಧಾನಿಯಾಗಿ ಇರುತ್ತಾರೆ. ಅದರ ನಂತರವೂ ಅವರು ನಮ್ಮನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದರು.

ಕಳೆದ 10 ವರ್ಷಗಳಲ್ಲಿ ಮೋದಿ ಅವರು ದೇಶವನ್ನು ಏಳಿಗೆಯತ್ತ ಕೊಂಡೊಯ್ದಿದ್ದಾರೆ. ಇದೇ ಕಾರಣಕ್ಕಾಗಿ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳುತ್ತಿದ್ದೇವೆ. ಪಶ್ಚಿಮ ಬಂಗಾಳದಲ್ಲಿಯೇ 24-30 ಕ್ಷೇತ್ರಗಳಲ್ಲಿ ಜಯ ನಮ್ಮದಾಗಲಿದೆ ಎಂದರು.

ಮೀಸಲಾತಿ ರದ್ದತಿ ಬಗ್ಗೆ ಮಾತನಾಡಿದ ಅವರು,ಕಳೆದ 10 ವರ್ಷಗಳಿಂದ ನಮ್ಮ ಬಹುಮತದ ಸರ್ಕಾರ ಇದೆ. ಆದರೆ, ನಾವು ಮೀಸಲಾತಿಯನ್ನು ರದ್ದುಗೊಳಿಸಿಲ್ಲ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!