ನಮ್ಮ ಸಂವಿಧಾನ ಸರ್ವರಿಗೂ ಸಮಾನ ಹಕ್ಕುಗಳನ್ನು ನೀಡಿದೆ: ಈಶ್ವರ ಖಂಡ್ರೆ

ಹೊಸದಿಗಂತ, ಬೀದರ್:

ಅಸಂಖ್ಯಾತ ದೇಶ ಪ್ರೇಮಿಗಳ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ 2 ಶತಮಾನಗಳಿಗೂ ಹೆಚ್ಚು ಕಾಲ ಪರಕೀಯರ ದಾಸ್ಯದಲ್ಲಿದ್ದ ಭಾರತ ಸ್ವಾತಂತ್ರ್ಯ ಪಡೆಯಿತು. 1947ರ ಆಗಸ್ಟ್ 15ರಂದು ಭಾರತ ಸ್ವತಂತ್ರ ದೇಶವಾಯಿತಾದರೂ, ಸಂವಿಧಾನವನ್ನು ಅಂಗೀಕರಿಸಿ ಸ್ವತಂತ್ರ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದ್ದು ಜನವರಿ 26, 1950 ರಂದು. ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ 75 ವರ್ಷವಾದರೂ ಗಟ್ಟಿಯಾಗಿ ನಿಲ್ಲಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಟ್ಟ ಬೃಹತ್ ಲಿಖಿತ ಸಂವಿಧಾನವೇ ಕಾರಣವಾಗಿದೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಬಿ. ಖಂಡ್ರೆ ಹೇಳಿದರು.

ಅವರು ಶುಕ್ರವಾರ ಜಿಲ್ಲಾಡಳಿತ ಬೀದರ ವತಿಯಿಂದ ಬೀದರ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೊತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾ ಸಮಿತಿ 2 ವರ್ಷ 11 ತಿಂಗಳು, 17 ದಿನಗಳ ಅವಧಿಯಲ್ಲಿ ಸುದೀರ್ಘ ಚರ್ಚೆ ನಡೆಸಿ ರಚಿಸಿದ ಲಿಖಿತ ಸಂವಿಧಾನ ನಮ್ಮದಾಗಿದೆ ಹಾಗೂ ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡಿದೆ ಎಂದು ಹೇಳಿದರು.

ನಾನು ಈ ಹಿಂದೆಯೂ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗ ಜಿಲ್ಲೆಯ ಸವಾರ್ಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದೆ. ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೋಗುವುದು ನನ್ನ ಗುರಿಯಾಗಿದೆ. ಬೀದರ್ ಜಿಲ್ಲೆಯ ವಿವಿಧ ಇಲಾಖೆಗಳ ಸಾಧನೆಯ ಸಿಂಹಾವಲೋಕನ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಪಕ್ಷಿನೋಟ ಬೀರಲು ನಾನು ಇಚ್ಚಿಸುತ್ತೇನೆ.

ಸಾಮಾಜಿಕ ಅರಣ್ಯ ವಿಭಾಗದಲ್ಲಿ 2023ರ ಮಳೆಗಾಲದಲ್ಲಿ ಒಟ್ಟು 555.24 ಹೆಕ್ಟರ್ ಹಾಗೂ ಕೃಷಿ ಅರಣ್ಯ ನೆಡುತೋಪು ಮತ್ತು ಸಾರ್ವಜನಿಕರಿಗೆ ವಿತರಣೆ ಸೇರಿ ಪ್ರದೇಶದಲ್ಲಿ 7.913 ಲಕ್ಷ ಸಸಿ ನೆಡುವ ಮೂಲಕ ಹಸಿರು ಹೊದಿಕೆ ಹೆಚ್ಚಿಸಲು ಪ್ರಯತ್ನಿಸಲಾಗಿದೆ.

ಸರ್ಕಾರದ ಮಹತ್ವಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆಯು 2023ನೇ ಜೂನ್ 11 ರಿಂದ ಈ ವರೆಗೆ ಬೀದರ ಜಿಲ್ಲೆಯ ಒಟ್ಟು 2 ಕೋಟಿ 39 ಲಕ್ಷ 84 ಸಾವಿರದ 9 ಮಹಿಳೆಯರು ಶಕ್ತಿ ಯೋಜನೆಯ ಸೌಲಭ್ಯ ಪಡೆದುಕೊಂಡಿರುತ್ತಾರೆ. ಪ್ರತಿ ದಿನ ಸರಸಾರಿ 1.07 ಲಕ್ಷ ಮಹಿಳೆಯರು ಉಚಿತವಾಗಿ ಬೀದರ ಜಿಲ್ಲೆಯಲ್ಲಿ ಪ್ರಯಾಣಿಸುತ್ತಿದ್ದಾರೆ.

ಗೃಹಜ್ಯೋತಿ ಯೋಜನೆಯಡಿ ಪ್ರತಿ ಗೃಹ ಬಳಕೆದಾರರು ಗರಿಷ್ಠ 200 ಯುನಿಟ್‍ವರೆಗೆ ವಿದ್ಯುತ್ ಉಚಿತವಾಗಿ ಪಡೆಯಬಹುದಾಗಿದ್ದು, ಬೀದರ ಜಿಲ್ಲೆಯಲ್ಲಿ ಒಟ್ಟು 3,73,884 ವಿದ್ಯುತ್ ಗ್ರಾಹಕರ ಪೈಕಿ 3,41,677 ವಿದ್ಯುತ್ ಗ್ರಾಹಕರು ಇದರ ಲಾಭ ಪಡೆಯುತ್ತಿದ್ದಾರೆ. ಈ ಯೋಜನೆಯು ಇಲ್ಲಿಯ ವರಗೆ ಶೇ.92 ಆಗಿದ್ದು, ಇನ್ನೂ ನೋಂದಣಿ ಪ್ರಕ್ರೀಯೆ ಚಾಲ್ತಿಯಲಿರುತ್ತದೆ. ಈ ಯೋಜನೆಯು ಜನ-ಸಾಮಾನ್ಯರ ಆಶಾಕಿರಣವಾಗಿದೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here