ನಮ್ಮ ಸರ್ಕಾರ ಬಡವರಿಗಾಗಿ ನಾಲ್ಕು ಕೋಟಿ ಮನೆ ನಿರ್ಮಿಸಿದೆ, ನನಗಾಗಿ ಒಂದು ಮನೆಯನ್ನೂ ಮಾಡಿಕೊಂಡಿಲ್ಲ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಮ್ಮ ಸರ್ಕಾರ ಬಡವರಿಗಾಗಿ ನಾಲ್ಕು ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿದೆ. ಸತ್ನಾದಲ್ಲಿ ಬಡವರಿಗೆ 1.32 ಲಕ್ಷ ಮನೆಗಳು ದೊರೆತಿವೆ. ಆದರೆ, ನನಗಾಗಿ ಒಂದು ಮನೆಯನ್ನೂ ಮಾಡಿಕೊಳ್ಳಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಧ್ಯಪ್ರದೇಶದ ಸತ್ನಾದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ದೇಶದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಕಲಿ ಫಲಾನುಭವಿಗಳಿಗೆ ಕಡಿವಾಣ ಹಾಕಲಾಗಿದೆ. ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದ ಕಾಂಗ್ರೆಸ್ ಸೃಷ್ಟಿಸಿದ್ದ 10 ಕೋಟಿ ನಕಲಿ ಫಲಾನುಭವಿಗಳನ್ನು ದಾಖಲೆಗಳಿಂದ ತೆಗೆದುಹಾಕಲಾಗಿದೆ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ನನ್ನನ್ನು ನಿಂದಿಸುತ್ತಿದ್ದಾರೆ. ಏಕೆಂದರೆ, ನಮ್ಮ ಸರ್ಕಾರದ ಈ ಕ್ರಮದಿಂದ ಕಾಂಗ್ರೆಸ್‌ನವರಿಗೆ ಬಲವಾದ ಹೊಡೆತ ಬಿದ್ದಿದೆ. ಸರ್ಕಾರವು ಜನರ 2.75 ಲಕ್ಷ ಕೋಟಿ ಉಳಿತಾಯ ಮಾಡಿದೆ ಎಂದು ಹೇಳಿದರು.

ಮಧ್ಯಪ್ರದೇಶದಲ್ಲಿ ಚಲಾವಣೆಯಾಗುವ ಪ್ರತಿಯೊಂದು ಮತವೂ ಕೂಡ ‘ತ್ರಿಶಕ್ತಿ’ಗಳಿಗೆ ಬಲ ನೀಡಲಿದೆ.ಒಂದನೆಯದು, ಮಧ್ಯಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚಿಸಲಿದೆ. ಎರಡನೆಯದು, ಕೇಂದ್ರದಲ್ಲಿ ಪ್ರಧಾನಿಗೆ ಬಲ ತುಂಬಲಿದೆ. ಮೂರನೆಯದು, ರಾಜ್ಯದಲ್ಲಿ ‘ಭ್ರಷ್ಟ’ ಕಾಂಗ್ರೆಸ್​ ಪಕ್ಷವನ್ನು ಅಧಿಕಾರದಿಂದ ದೂರ ಉಳಿಸಲಿದೆ. ಇದರರ್ಥ ಒಂದು ಮತ, ಮೂರು ಅದ್ಭುತಗಳು. ಇದೊಂದು ರೀತಿ ‘ತ್ರಿಶಕ್ತಿ’ ಎಂದು ಮೋದಿ ಹೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ , ನಾನು ಎಲ್ಲಿಗೆ ಹೋದರೂ ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣದ ಬಗ್ಗೆ ಮಾತನಾಡಲಾಗುತ್ತಿದೆ. ದೇಶದೆಲ್ಲೆಡೆ ಸಂತಸದ ಅಲೆ ಎದ್ದಿದೆ. ಇದೇ ವೇಳೆ, ನಾವು ಹೊಸ ಸಂಸತ್ತಿನ ಕಟ್ಟಡ ನಿರ್ಮಿಸಿದ್ದರೆ, 30,000 ಪಂಚಾಯತ್ ಕಟ್ಟಡಗಳನ್ನೂ ನಿರ್ಮಿಸಿದ್ದೇವೆ ಎಂದು ಹೇಳಿದರು.

ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದಿಂದಾಗಿ ಬಡವರಿಗೆ ಲಕ್ಷಗಟ್ಟಲೆ ಮನೆಗಳನ್ನು ನಿರ್ಮಿಸಿದ ರಾಜ್ಯಗಳಲ್ಲಿ ಮಧ್ಯಪ್ರದೇಶವೂ ಒಂದು ಎಂಬುವುದೇ ನನಗೆ ಸಂತೋಷ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಾರಂಭವಾದ ಬಡವರಿಗೆ ಉಚಿತ ಪಡಿತರ ಯೋಜನೆಯನ್ನು ಡಿಸೆಂಬರ್ ನಂತರ ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸುವ ಸಂಕಲ್ಪವನ್ನೂ ನಾವು ಮಾಡಿದ್ದೇವೆ ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!