ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಇಂಡಿಯಾ ಒಕ್ಕೂಟದಲ್ಲಿ ಭಿನ್ನಮತ ತಲೆದೋರಿದ್ದು, ಈಗಾಗಲೇ ನಿತೀಶ್ ಕುಮಾರ್ ಇಂಡಿಯಾ ಒಕ್ಕೂಟ ತೊರೆದಿದ್ದು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಿದೆ .
ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ಕಾಂಗ್ರೆಸ್ ಜತೆಗಿನ ನಮ್ಮ ಮದುವೆಯು (ಆಪ್-ಕಾಂಗ್ರೆಸ್ ಮೈತ್ರಿ) (AAP Congress Alliance) ಶಾಶ್ವತ ಅಲ್ಲ” ಎಂದು ಹೇಳುವ ಮೂಲಕ ಮೈತ್ರಿ ಮುರಿದುಕೊಳ್ಳುವ ಸೂಚನೆ ನೀಡಿದ್ದಾರೆ.
ಇಂಡಿಯಾ ಟುಡೇ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಜತೆ ನಾವೇನು ಖಾಯಂ ಮದುವೆ ಮಾಡಿಕೊಂಡಿಲ್ಲ. ಈಗ ಬಿಜೆಪಿಯನ್ನು ಸೋಲಿಸುವುದಷ್ಟೇ ನಮ್ಮ ಗುರಿಯಾಗಿದೆ. ಸರ್ವಾಧಿಕಾರ ಹಾಗೂ ಗೂಂಡಾಗಿರಿಯನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ನಾವು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ದೇಶವನ್ನು ಉಳಿಸುವುದು ನಮಗೆ ಮುಖ್ಯ ಉದ್ದೇಶವಾಗಿದೆ. ಬಿಜೆಪಿಯನ್ನು ಸೋಲಿಸುವ ದೃಷ್ಟಿಯಿಂದ ಮಾತ್ರ ನಾವು ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಹೇಳಿರುವುದು ಭಾರಿ ಸಂಚಲನ ಮೂಡಿಸಿದೆ.
ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಜೈಲುಪಾಲಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದಾಗಿ ಬಿಜೆಪಿ ಆಗ್ರಹಿಸುತ್ತಿದೆ. ಇದರ ಕುರಿತು ಪ್ರತಿಕ್ರಿಯಿಸಿದ ಅವರು, “ಬಿಜೆಪಿ ಹೇಳಿತು ಎಂದ ಮಾತ್ರಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅಷ್ಟಕ್ಕೂ, ನಾನು ಜೈಲಿಗೆ ಹೋಗುತ್ತೇನೆ ಎಂಬುದು ಮುಖ್ಯ ವಿಷಯವಲ್ಲ. ದೇಶದ ಭವಿಷ್ಯದ ಬಗ್ಗೆ ನನಗೆ ಚಿಂತೆ ಇದೆ. ಅವರಿಗೆ ಎಷ್ಟು ದಿನ ಬೇಕೋ, ಅಷ್ಟು ದಿನ ನನ್ನನ್ನು ಜೈಲಿನಲ್ಲಿ ಇರಿಸಲಿ. ನಾವು ಯಾವುದೇ ಕಾರಣಕ್ಕೂ ಕುಗ್ಗುವುದಿಲ್ಲ, ಹೋರಾಟ ನಿಲ್ಲಿಸಲ್ಲಎಂದಿದ್ದಾರೆ.