February 5, 2026
Thursday, February 5, 2026
spot_img

ನಮ್ಮ ಜನರು ಯಾವಾಗಲೂ ಭಾರತದ ದೊಡ್ಡ ಶಕ್ತಿ: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಸಭೆಯಲ್ಲಿ ಇಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಸಂಬಂಧ ಪ್ರಧಾನಿ ಮೋದಿ ಮಾತನಾಡಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಆರ್ಥಿಕತೆಯಲ್ಲಿ 6ನೇ ಸ್ಥಾನದಲ್ಲಿ ಭಾರತ ಇತ್ತು. ಇವರೆಲ್ಲಾ ಸೇರಿ 12ನೇ ಸ್ಥಾನಕ್ಕೆ ಇಳಿಸಿ ಬಿಟ್ಟರು. ಆದರೆ ನಾವು ಅಧಿಕಾರಕ್ಕೆ ಬಂದ ಬಳಿಕ 3ನೇ ಸ್ಥಾನಕ್ಕೆ ಬಂದಿದ್ದೇವೆ. ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

2014ರಲ್ಲಿ ಕಾಂಗ್ರೆಸ್ ಒಂದು ಅವ್ಯವಸ್ಥೆಯನ್ನು ಬಿಟ್ಟು ಹೋಗಿತ್ತು. ಇಂದು ನಾವು ನಮ್ಮ ಶಕ್ತಿಯ ಮಹತ್ವದ ಭಾಗವನ್ನು ಹಿಂದಿನ ತಪ್ಪುಗಳನ್ನು ಸರಿಪಡಿಸಲು ಬಳಸಲಾಗುತ್ತಿದೆ. ಆ ಅವಧಿಯಲ್ಲಿ ಭಾರತದ ಬಗ್ಗೆ ಸೃಷ್ಟಿಯಾದ ಚಿತ್ರಣವನ್ನು ಅಳಿಸಲು ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಹೇಳಿದರು.

ಪ್ರತಿಪಕ್ಷಗಳ ತೀವ್ರ ಗದ್ದಲ ಹಾಗೂ ಕೋಲಾಹದ ನಡುವೆ ದೇಶದ ಪ್ರಗತಿಯ ಕುರಿತು ವಿವರಣೆ ನೀಡಿದ ಪ್ರಧಾನಿ ಮೋದಿ, ಜವಾಹರಲಾಲ್ ನೆಹರು ಅವರು ಭಾರತದ ಆಗಿನ 35 ಕೋಟಿ ಜನಸಂಖ್ಯೆಯನ್ನು ಒಂದು ಪ್ರಮುಖ ಸವಾಲು ಎಂದು ವಿವರಿಸಿದ್ದರು. ಇಂದಿರಾ ಗಾಂಧಿ ಇರಾನ್ ಭೇಟಿಯ ಸಮಯದಲ್ಲಿ ಭಾರತದ ಸಮಸ್ಯೆ 57 ಕೋಟಿ ಜನರಿಗೆ ಏರಿಕೆಯಾಗಿದೆ ಎಂದು ಹೇಳಿದ್ದರು. ತನ್ನ ದೇಶದ ಜನಸಂಖ್ಯೆಯು ಒಂದು ಹೊರೆಯಾಗಿದೆ ಎಂಬ ಕಲ್ಪನೆಯನ್ನು ಅವರು ಬಿತ್ತರಿಸಿದರು. ಆದರೆ, ನಾವು ನಮ್ಮ ದೇಶದ ಜನರು ಯಾವಾಗಲೂ ಭಾರತದ ದೊಡ್ಡ ಶಕ್ತಿ ಎಂದು ಪ್ರತಿಪಾದಿಸಿದೆವು ಎಂದು ಮೋದಿ ಹೇಳಿದರು.

ಹಲವಾರು ದೇಶಗಳೊಂದಿಗೆ ಭಾರತವು ಭವಿಷ್ಯಕ್ಕೆ ಸಿದ್ಧವಾದ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುತ್ತಿದೆ. ಕಳೆದ ಕೆಲವು ದಿನಗಳಲ್ಲಿ, ನಾವು ವಿಶ್ವದ 9 ದೊಡ್ಡ ಮತ್ತು ಪ್ರಮುಖ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ. 27 ದೇಶಗಳೊಂದಿಗೆ, ಯುರೋಪಿಯನ್ ಒಕ್ಕೂಟದೊಂದಿಗೆ ಮಾಡಿಕೊಂಡಿರುವ ಒಪ್ಪಂದವೂ ಒಪ್ಪಂದಗಳ ಮಹಾ ತಾಯಿ ಎಂದು ಬಣ್ಣಿಸಿದರು.

ನಾವು ದೇಶದ ಯುವಕರಿಗೆ ಮುದ್ರಾ ಯೋಜನೆಯಡಿಯಲ್ಲಿ 30 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಸಾಲವನ್ನು ನೀಡಿದ್ದೇವೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ತಾಯಂದಿರು ಮತ್ತು ಸಹೋದರಿಯರು ಸೇರಿದ್ದಾರೆ. ಮಹಿಳೆಯರು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವ ಕನಸು ಕಾಣುತ್ತಿದ್ದಾರೆ. ನಾವು ಅವರಿಗೆ ನೇರ ಆರ್ಥಿಕ ಸಹಾಯವನ್ನು ಒದಗಿಸಿದ್ದೇವೆ ಎಂದಿದ್ದಾರೆ.

ನಾವು ಸಣ್ಣ ರೈತರ ಬಗ್ಗೆ ಬಹಳ ಸಹಾನುಭೂತಿಯನ್ನು ಹೊಂದಿದ್ದೇವೆ. ಅವರಿಗಾಗಿ ನಾವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಪರಿಚಯಿಸಿದ್ದೇವೆ. ಇಲ್ಲಿಯವರೆಗೆ, ಈ ರೈತರ ಖಾತೆಗಳಿಗೆ 4 ಲಕ್ಷ ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ. ಈ ಯೋಜನೆಯು ರೈತರಿಗೆ ಹೊಸ ಕನಸುಗಳನ್ನು ಕಾಣುವ ಅವಕಾಶವನ್ನು ನೀಡಿದೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !