March 24, 2026
Tuesday, March 24, 2026
spot_img

ನಮ್ಮ ಸಂಕಷ್ಟ ಯಾರ ಕಿವಿಗೂ ಬೀಳುತ್ತಲೇ ಇಲ್ಲ: ಕಾರಂಜಾ ಸಂತ್ರಸ್ತರ ಆಕ್ರೋಶ

ಹೊಸದಿಗಂತ ವರದಿ ​ಬೀದರ್:

ಕಳೆದ ಐದು ದಶಕಗಳಿಂದ ಕಾರಂಜಾ ಸಂತ್ರಸ್ತರು ತಮ್ಮ ಹಕ್ಕಿನ ಜಮೀನು ಕಳೆದುಕೊಂಡು ವೈಜ್ಞಾನಿಕ ರೀತಿಯಲ್ಲಿ ಪರಿಹಾರದ ಹಣ ಬಿಡುಗಡೆ ಆಗುವ ಆಶಯದಲ್ಲಿದ್ದಾರೆ. 2023ರ ಚುನಾವಣೆ ವೇಳೆ ಬೀದರ್ ನಗರಕ್ಕೆ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚುನಾವಣೆ ಗೆದ್ದ ಬಳಿಕ ಕಾರಂಜಾ ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡಲಾಗುವುದು ಎಂದು ಹೇಳಿದ್ದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳೇ ಕಳೆದಿವೆ, ಮೂರು ಸಾಲಿನ ಬಜೆಟ್ನಲ್ಲಿ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಹಣ ಘೋಷಣೆ ಮಾಡದೆ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮತ್ತು ಜಿಲ್ಲೆಯ ಇನ್ನೋರ್ವ ಸಚಿವ ರಹೀಂ ಖಾನ್ ಕಾರಂಜಾ ಸಂತ್ರಸ್ತರಿಗೆ ದೋಖಾ ಮಾಡಿದ್ದಾರೆ.

ಸಂತ್ರಸ್ತರು ತಮಗೆ ಪರಿಹಾರದ ಹಣ ಬಿಡುಗಡೆ ಪ್ರತಿಭಟಿಸುತ್ತಿದ್ದರೆ, ಪರಿಹಾರದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಬಳಿ ಮನವಿ ಪತ್ರ ಕೊಟ್ಟು ಮಾತನಾಡಿಸಲು ಹೋದರೆ ಹೋದವರ ಮೇಲೆಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಾನಗೇಡಿ ಸಚಿವ ಈಶ್ವರ ಖಂಡ್ರೆಗೆ ಕಳೆದ ದಿವಸ ಅಖಿಲ ಕರ್ನಾಟಕ ಲಿಂಗಾಯತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿದ್ದು ಸನ್ಮಾನ ಸ್ವೀಕರಿಸಲು ಮೆರವಣಿಗೆ ಮಾಡಲು ಸಮಯವಿದೆ ಆದರೆ ಕಳೆದ ಐದು ದಶಕಗಳಿಂದ ಹೋರಾಡುತ್ತಿರುವ ನಮ್ಮ ಮನವಿ ಆಲಿಸಲು ಸಮಯವಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸತ್ತರೆನೆ ನಮ್ಮ ಮುಂದಿನ ಪೀಳಿಗೆಗಾದರೂ ಪರಿಹಾರ ಸಿಗುವ ನಿರೀಕ್ಷೆ ಇಡಬಹುದು ಎಂದು ಜಿಲ್ಲೆಯ 29 ಗ್ರಾಮಗಳ ಕಾರಂಜಾ ಸಂತ್ರಸ್ತ ಹಿತರಕ್ಷಣಾ ವೇದಿಕೆಯ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಕಳೆದ ಮೂರು ಚುನಾವಣೆಗಳಲ್ಲಿ ಕಾರಂಜಾ ಸಂತ್ರಸ್ತರಿಗೆ ಪರಿಹಾರದ ಭರವಸೆ ನೀಡಿ ಗೆದ್ದಿರುವ ಸಚಿವ ಈಶ್ವರ ಖಂಡ್ರೆಗೆ ಕಾರಂಜಾ ಸಂತ್ರಸ್ತರ ಸಂಕಷ್ಟ ಕಿವಿಗೆ ಬೀಳುತ್ತಲೇ ಇಲ್ಲ, ಕನಿಷ್ಠ ಮಾನವೀಯತೆ ಇಲ್ಲದ ಸಚಿವ ಈಶ್ವರ ಖಂಡ್ರೆಗೆ ಅಖಿಲ ಕರ್ನಾಟಕ ಲಿಂಗಾಯತ ವೀರಶೈವ ಮಹಾಸಭೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ ಆ ಪವಿತ್ರ ಸಂಘದ ಗದ್ದುಗೆಗೆ ಘೋರ ಅಪಮಾನ ಮಾಡಿದಂತಾಗಿದೆ.

ಸುಳ್ಳು ಹೇಳಿಯೇ ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳುವ ಸಚಿವ ಈಶ್ವರ ಖಂಡ್ರೆ ಬಾಯಿಂದ ವಿಶ್ವ ಗುರು ಬಸವಣ್ಣನವರ ಪ್ರಸಿದ್ಧ ವಚನ “ಕಲ ಬೇಡ ಕುಲ ಬೇಡ, ಹುಸಿಯ ನುಡಿಯಲು ಬೇಡ, ಇದೆ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ” ಎಂಬ ವಚನ ಕೇಳುವುದಾದರೂ ಹೇಗೆ???, ಆ ಮಹಾನ್ ವಿಶ್ವ ಅಧ್ಯಾತ್ಮಿಕ ಗುರುವಿನ ತತ್ವಕ್ಕೆ ಮಣ್ಣು ಎರಚುವ ಸಚಿವ ಈಶ್ವರ ಖಂಡ್ರೆ ಯಂತಹ ಮೋಸಗಾರರನ್ನು ನಂಬುವುದು ಎಂದರೆ ಮೊಸಳೆ ಬಾಯಲ್ಲಿ ತಲೆ ಇಟ್ಟಂತೆ, ಕಾರಂಜಾ ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ಸಿಗಲೆಂದು ಶೀಘ್ರವೇ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಈಶ್ವರ ಖಂಡ್ರೆ ಹೆಸರಿನಿಂದ ಎಳ್ಳು ನೀರು ಬಿಡುವ ಪ್ರತಿಭಟನೆ ನಡೆಸಲಾಗುವುದು ಎಂದು ಕಾರಂಜಾ ಸಂತ್ರಸ್ತ ಹಿತರಕ್ಷಣಾ ವೇದಿಕೆಯ ರೈತರಾದ ಸೋಮನಾಥ ಪಾಟೀಲ, ಬಳವಂತರಾವ ಪಾಟೀಲ್, ಅಶೋಕರಾವ ಡಾಕುಳಗಿ, ಪ್ರದೀಪ ಹಿಲಾಲಪುರ, ಪವನ ಮೊಗದಾಳ್, ಹೊಸದಿಗಂತಕ್ಕೆ ಪ್ರತಿಕ್ರಿಯಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !