ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಕ್ರೋಸಾಫ್ಟ್‌ನ ಸೇವೆಯಲ್ಲಿ ಇಂದು ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು, ವಿಶ್ವಾದ್ಯಂತದ ಕೋಟ್ಯಂತರ ಬಳಕೆದಾರರು ಪರದಾಡುವಂತಾಗಿದೆ.
ವಿಮಾನ ಸೇವೆ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯವಾಗಿದೆ. ಭಾರತ ಸೇರಿದಂತೆ ವಿಶ್ವಾದ್ಯಂತ ಈ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ಭಾರಿ ಆಕ್ರೋಶ, ಟೀಕೆ, ಮೀಮ್ಸ ಹರಿದಾಡಿದೆ.
ಇದರ ಬೆನ್ನಲ್ಲೇ ಕ್ರೌಡ್‌ಸ್ಟ್ರೈಕ್ ಸಮಸ್ಯೆ ಪತ್ತೆ ಹಚ್ಚಿ, ಸರಿಪಡಿಸುವಲ್ಲಿ ನಿರತವಾಗಿದೆ. ಈ ಕುರಿತು ಕ್ರೌಡ್‌ಸ್ಟ್ರೈಕ್ ಅಧಿಕೃತ ಮಾಹಿತಿ ನೀಡಿದ್ದು, ಇದು ಭದ್ರತಾ ಸಮಸ್ಯೆ ಅಥವಾ ಸೈಬರ್ ದಾಳಿಯಲ್ಲ ಎಂದು ಸ್ಪಷ್ಟಪಡಿಸಿದೆ .
ಮೈಕ್ರೋಸಾಫ್ಟ್‌ನಲ್ಲಿರುವ ಭದ್ರತಾ ಸಂಸ್ಥೆ ಕ್ರೌಡ್‌ಸ್ಟ್ರೈಕ್ ಇತ್ತೀಚೆಗೆ ಮಾಡಿದ ಅಪ್‌ಡೇಟ್ ಬಳಿಕ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಅಪ್‌ಡೇಟ್‌ನಿಂದ ವಿಂಡೋಸ್ ಲ್ಯಾಪ್‌ಟಾಪ್ ಹಾಗೂ ಡೆಸ್ಕ್‌ಟಾಪ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಮೈಕ್ರೋಸಾಫ್ಟ್ ಕ್ರೌಡ್‌ಸ್ಟ್ರೈಕ್ ಸಮಸ್ಯೆಯಾಗುತ್ತಿದ್ದಂತೆ ಬ್ಯಾಂಕಿಂಗ್ ಕ್ಷೇತ್ರ, ವಿಮಾನಯಾನ ಸೇರಿದಂತೆ ಹಲವು ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದೆ. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಕ್ರೌಡ್‌ಸ್ಟ್ರೈಕ್ ಸಮಸ್ಯೆ ಪತ್ತೆ ಹಚ್ಚಿ ಇದೀಗ ಪರಿಹಾರ ಒದಗಿಸುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಕ್ರೌಡ್‌ಸ್ಟ್ರೈಕ್ ಸಿಇಒ ಜಾರ್ಜ್ ಕುರ್ಜ್, ಸಮಸ್ಯೆಯನ್ನು ಕಂಪನಿ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ತಜ್ಞರು, ತಾಂತ್ರಿಕ ತಂಡ ಕಾರ್ಯನಿರ್ವಹಿಸುತ್ತಿದೆ ಸಮಸ್ಯೆ ಪತ್ತೆ ಹಚ್ಚಲಾಗಿದ್ದು, ಶೀಘ್ರದಲ್ಲೇ ಎಲ್ಲವೂ ಪರಿಹಾರವಾಗಲಿದೆ. ಕ್ರೌಡ್‌ಸ್ಟ್ರೈಕ್ ಸಮಸ್ಯೆ ಕೇವಲ ವಿಂಡೋಸ್ ಹೋಸ್ಟ್‌ನಲ್ಲಿ ಮಾತ್ರ ಕಾಣಿಸಿಕೊಂಡಿದೆ. ಮ್ಯಾಕ್ಸ್ ಹಾಗೂ ಲಿನಕ್ಸ್ ಹೋಸ್ಟ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಇದು ಯಾವುದೇ ಭದ್ರತಾ ಸಮಸ್ಯೆ ಅಥವಾ ಸೈಬರ್ ದಾಳಿಯಲ್ಲಿ. ತಾಂತ್ರಿಕ ಸಮಸ್ಯೆ ಪತ್ತೆ ಹಚ್ಚಲಾಗಿದೆ ಎಂದು ಹೇಳಿದ್ದಾರೆ.
ತಾಂತ್ರಿಕ ತಂಡ ನಿರಂತವರಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರು ಯಾವುದೇ ಸಮಯದಲ್ಲಿ ನೆರವು ಬೇಕಾದಲ್ಲಿ ಕ್ರೌಡ್‌ಸ್ಟ್ರೈಕ್ ತಂಡ ಸಂರ್ಕಿಸಬಹುದು. ಅಧಿಕೃತ ಮೂಲಗಳ ಮೂಲಕ ತಂಡ ಗ್ರಾಹಕರ ಸೇವೆ ಸದಾ ಸಿದ್ದವಿದೆ ಎಂದು ಜಾರ್ಜ್ ಕುರ್ಜ್ ಹೇಳಿದ್ದಾರೆ. ಥರ್ಡ್ ಪಾರ್ಟಿ ಮಾಡಿದ ಸಾಫ್ಟ್‌ವೇರ್ ಅಪ್‌ಡೇಟ್‌ನಿಂದ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದಿದೆ.