ಬಜರಂಗದಳ ನಿಷೇಧ ಪ್ರಸ್ತಾಪಿಸಿದ ಕಾಂಗ್ರೆಸ್‌ ವಿರುದ್ಧ ಹಿಂದು ಸಂಘಟನೆಗಳ ಆಕ್ರೋಶ

ಹೊಸದಿಗಂತ ವರದಿ ಮಡಿಕೇರಿ:

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಕುರಿತು ಉಲ್ಲೇಖಿಸಿರುವುದು ಹಿಂದುಗಳಿಗೆ ಮಾಡಿದ ಅವಮಾನ ಮತ್ತು ಈ ಪ್ರಸ್ತಾಪ ಖಂಡನೀಯ ಎಂದು ವಿಶ್ವ ಹಿಂದು ಪರಿಷದ್, ಬಜರಂಗದಳ ಮತ್ತು ಮಾತೃಶಕ್ತಿ, ದುರ್ಗಾವಾಹಿನಿಯ ಕೊಡಗು ಜಿಲ್ಲಾ ಘಟಕಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

ಪತ್ರಿಕಾ ಹೇಳಿಕೆ‌ ನೀಡಿರುವ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ದೇಶಭಕ್ತ ಸಂಘಟನೆಯಾಗಿರುವ ಬಜರಂಗದಳವು ದೇಶದ 60 ಸಾವಿರ ಗ್ರಾಮಗಳಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ದೇಶಭಕ್ತ ಸಂಘಟನೆಯೊoದನ್ನು ದೇಶವಿರೋಧಿ ಸಂಘಟನೆಯ ಜೊತೆ ತುಲನೆ ಮಾಡಿರುವುದು ಅತ್ಯಂತ ಖಂಡನೀಯ.

ಶ್ರೀರಾಮ ಮಂದಿರ ಹೋರಾಟದಿಂದ ಹಿಡಿದು ಹಿಂದು ಶ್ರದ್ಧಾ ಕೇಂದ್ರಗಳ ರಕ್ಷಣೆ, ಗೋರಕ್ಷಣೆ, ಲವ್ ಜಿಹಾದ್ಗೆ ಬಲಿಯಾದ ಹೆಣ್ಣುಮಕ್ಕಳ ರಕ್ಷಣೆ ಮತ್ತು ಆರೈಕೆಯನ್ನು ಬಜರಂಗದಳ ಮಾಡಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ದೇಶಕ್ಕೆ ದೇಶವೇ ತತ್ತರಿಸಿ ತನ್ನವರ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಕರೇ ಭಯಪಡುವಂತಹ ಭೀಕರ ಪರಿಸ್ಥಿತಿ ಎದುರಾದಾಗ ಬಜರಂಗದಳದ ಸ್ವಯಂಸೇವಕರು ಜೀವದ ಹಂಗು ತೊರೆದು ಶವ ಸಂಸ್ಕಾರ ಮತ್ತು ಸಾಂತ್ವನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಪ್ರಾಕೃತಿಕ ವಿಕೋಪದ ಸಂದರ್ಭವೂ ಜನಪರವಾಗಿ ಶ್ರಮಿಸಿದ್ದಾರೆ.

ಹೋರಾಟದ ಎಚ್ಚರಿಕೆ: ಹೆಮ್ಮೆಯ ದೇಶಭಕ್ತ ಸಂಘಟನೆಯನ್ನು ನಿಷೇಧಿಸುವ ಕುರಿತು ಕಾಂಗ್ರೆಸ್ ಮಾಡಿರುವ ಪ್ರಸ್ತಾಪದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಸುರೇಶ್ ಮುತ್ತಪ್ಪ ಎಚ್ಚರಿಕೆ ನೀಡಿದ್ದಾರೆ.

ಬಜರಂಗದಳ ಖಂಡನೆ: ಯಾವುದೇ ದೇಶದ್ರೋಹ ಪ್ರಕರಣದಲ್ಲಿ ಭಾಗಿಯಾಗದೇ, ಹಿಂದುಗಳ ರಕ್ಷಣೆ ಹಾಗೂ ಏಳಿಗೆಗೆ ಶ್ರಮಿಸುತ್ತಿರುವ ಬಜರಂಗದಳವನ್ನು ನಿಷೇಧ ಮಾಡುತ್ತೇವೆಂದು ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ಕಾಂಗ್ರೆಸ್ ಪಕ್ಷದ ಕ್ರಮ ಖಂಡನೀಯ ಎಂದು ಭಜರಂಗದಳದ ಸೋಮವಾರಪೇಟೆ ತಾಲೂಕು ಸಂಚಾಲಕ ಜೀವನ್ ನೇಗಳ್ಳೆ ತಿಳಿಸಿದ್ದಾರೆ.
ರಾಮಮಂದಿರ ನಿರ್ಮಾಣದ ಸಂದರ್ಭ ಮುಂಚೂಣಿಯಲ್ಲಿದ್ದ ಬಜರಂಗದಳ ರಾಷ್ಟ್ರದ 60 ಸಾವಿರ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಗೋಹತ್ಯೆ ನಿಷೇಧ, ಮತಾಂತರ, ಲವ್‌ಜಿಹಾದ್ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ದೇಶಭಕ್ತ ಸಂಘಟನೆಯನ್ನು ನಿಷೇಧಿಸುವುದಾಗಿ ಹೇಳಿರುವ ಕಾಂಗ್ರೆಸ್’ನ್ನು ಸೋಲಿಸಿ ಹಿಂದೂಗಳ ಪರವಾಗಿರುವ ಪಕ್ಷವನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!