ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ಪರೀಕ್ಷಾ ಸುಧಾರಣಾ ಕಾರ್ಯಪಡೆಯ ಸದಸ್ಯರಾದ ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ವಿ. ಕಾಮಕೋಟಿ ಅವರನ್ನು ಸಂಸತ್ತಿನಲ್ಲಿ ‘ಗೋಮೂತ್ರ ತಜ್ಞ’ ಎಂದು ಕರೆದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ದೇಶದ ಪ್ರಸಿದ್ಧ ವಿಜ್ಞಾನಿಯೊಬ್ಬರ ಸಾಧನೆಗಳನ್ನು ಕೀಳಾಗಿ ಕಂಡಿದ್ದನ್ನು ಖಂಡಿಸಿ, 215 ಹಾಲಿ ಹಾಗೂ ಮಾಜಿ ಕುಲಪತಿಗಳು ಮತ್ತು ಪ್ರಮುಖ ಶಿಕ್ಷಣತಜ್ಞರು ಪ್ರಿಯಾಂಕಾ ಗಾಂಧಿಯವರಿಗೆ ಬಹಿರಂಗ ಪತ್ರ ಬರೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ ವಿದ್ವಾಂಸರು ಹೇಳಿದ್ದೇನು?
ರಾಜಕೀಯ ಲಾಭಕ್ಕಾಗಿ ಅಥವಾ ವ್ಯಂಗ್ಯಕ್ಕಾಗಿ ವಿಜ್ಞಾನಿಗಳ ಮೇಲೆ ಆಧಾರರಹಿತ ಲೇಬಲ್ ಅಂಟಿಸುವುದು ವೈಜ್ಞಾನಿಕ ಮನೋಭಾವಕ್ಕೆ ಧಕ್ಕೆ ತರುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ. ವಿಚಾರಗಳನ್ನು ಆಧರಿಸಿ ಚರ್ಚಿಸುವ ಬದಲು ವ್ಯಕ್ತಿತ್ವ ಹರಣ ಮಾಡುವುದು ಸರಿಯಲ್ಲ. ವಿಜ್ಞಾನಿಗಳು ಯಾವುದೇ ಅಪಹಾಸ್ಯದ ಭಯವಿಲ್ಲದೆ ಸಾರ್ವಜನಿಕ ಚರ್ಚೆಗಳಲ್ಲಿ ಭಾಗವಹಿಸುವ ವಾತಾವರಣ ಇರಬೇಕು ಎಂದು ಪ್ರತಿಪಾದಿಸಲಾಗಿದೆ.



