ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡಿನ ಓವಲ್ ಮೈದಾನದಲ್ಲಿ ನಡೆದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 6 ರನ್‌ಗಳ ರೋಚಕ ಜಯ ಸಾಧಿಸಿ ಇತಿಹಾಸ ನಿರ್ಮಿಸಿತು. ಈ ಮಹತ್ವದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ವಿರಾಟ್ ಕೊಹ್ಲಿ ಭೇಷ್ ಎಂದು ಹೊಗಳಿದ್ದಾರೆ.
ಐದನೇ ದಿನದಾಟದ ಆರಂಭದಲ್ಲಿ ಭಾರತಕ್ಕೆ ಗೆಲ್ಲಲು 4 ವಿಕೆಟ್ ಬೇಕಾಗಿತ್ತು, ಇಂಗ್ಲೆಂಡ್‌ಗೆ ಕೇವಲ 35 ರನ್. ಆದರೆ ಕ್ರೂರ ದಾಳಿಗೆ ಇಳಿದ ಸಿರಾಜ್ ಕೇವಲ ಕೆಲವು ಓವರ್ ನಲ್ಲಿ 3 ವಿಕೆಟ್ ಕಬಳಿಸಿ ಪಂದ್ಯವನ್ನು ಭಾರತ ಪಾಲು ಮಾಡಿದರು. ಈ ಯಶಸ್ಸು ಭಾರತ ಟೆಸ್ಟ್ ತಂಡದ ಇತ್ತೀಚಿನ ವರ್ಷದ ಅತ್ಯುತ್ತಮ ಸಾಧನೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.
ವಿಜಯದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ ಕೊಹ್ಲಿ, “ಸಿರಾಜ್ ಮತ್ತು ಪ್ರಸಿದ್ಧ್ ಅವರ ಸಂಕಲ್ಪ, ತಂಡಕ್ಕಾಗಿ ನೀಡಿದ ಶ್ರಮ ಶ್ಲಾಘನೀಯ. ಸಿರಾಜ್ ಅವರ ನಿಷ್ಠೆ ನನಗೆ ತುಂಬಾ ಸಂತೋಷ ತಂದಿದೆ” ಎಂದು ಎಕ್ಸ್ ಖಾತೆಯಲ್ಲಿ ಬರೆದು ಅವರನ್ನು ಶ್ಲಾಘಿಸಿದರು.
ವಿರಾಟ್ ಕೊಹ್ಲಿಯ ಈ ಶ್ಲಾಘನೆಗೆ ಸ್ಪಂದಿಸಿರುವ ಸಿರಾಜ್, “ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು ಭಯ್ಯಾ” ಎಂದು ಬರೆದು ತಮ್ಮ ಗೌರವವನ್ನು ವ್ಯಕ್ತಪಡಿಸಿದರು. ಸಿರಾಜ್ ಟೆಸ್ಟ್ ಬೌಲಿಂಗ್ ಪ್ರವಾಸ ಆರಂಭಿಸಿದ್ದು ಕೊಹ್ಲಿಯ ನಾಯಕತ್ವದಲ್ಲೇ. ಹೀಗಾಗಿ ಕೊಹ್ಲಿಯ ಮಾರ್ಗದರ್ಶನವು ತನ್ನ ಕ್ರಿಕೆಟ್ ಜೀವನದ ಉನ್ನತ ಘಟ್ಟವಾಗಿತ್ತು ಎಂಬುದಾಗಿ ಸಿರಾಜ್ ಹಲವು ಬಾರಿ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿಯ ನಾಯಕರಾಗಿದ್ದ ಅವಧಿಯಲ್ಲಿ ಸಿರಾಜ್ 51 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 81 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕೊಹ್ಲಿಯ ಟೆಸ್ಟ್ ನಿವೃತ್ತಿಯ ಸಂದರ್ಭದಲ್ಲಿ ಸಿರಾಜ್, “ನನ್ನ ಸೂಪರ್ ಹೀರೋನನ್ನು ನಾನು ಇನ್ನು ಮುಂದೆ ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.
ಇಂದು, ಇಂಗ್ಲೆಂಡ್‌ನ ನೆಲದಲ್ಲಿ ರೋಚಕ ಪ್ರದರ್ಶನ ನೀಡಿ ಭಾರತಕ್ಕೆ ಜಯ ತಂದುಕೊಟ್ಟ ಸಿರಾಜ್, ಮತ್ತೆ ಒಮ್ಮೆ ತಮ್ಮ ಗುರು ಕೊಹ್ಲಿಗೆ ಧನ್ಯವಾದಗಳನ್ನು ಅರ್ಪಿಸಿದ್ದು, ಅವರ ನಡುವೆ ಇರುವ ಬಾಂಧವ್ಯವನ್ನು ಸ್ಪಷ್ಟಪಡಿಸಿದೆ.