ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಒಂದು ವಾರದಿಂದ ಮುಚ್ಚಿರುವುದರಿಂದ ಕಾಶ್ಮೀರದ ಹಣ್ಣು ಬೆಳೆಗಾರರು ಭಾರಿ ನಷ್ಟವನ್ನು ಎದುರಿಸುತ್ತಿದ್ದಾರೆ.
ಕೋಟಿಗಟ್ಟಲೆ ಮೌಲ್ಯದ ಸೇಬು ಮತ್ತು ಪೇರಳೆ ಹಣ್ಣುಗಳನ್ನು ಸಾಗಿಸುತ್ತಿದ್ದ 1,000 ಕ್ಕೂ ಹೆಚ್ಚು ಹಣ್ಣು ತುಂಬಿದ ಟ್ರಕ್‌ಗಳು ಹೆದ್ದಾರಿ ಮಧ್ಯೆ ಸಿಲುಕಿ ಹಾಕಿಕೊಂಡಿವೆ. ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಹೆದ್ದಾರಿ, ಭಾರೀ ಮಳೆಯ ನಂತರ ಉಧಂಪುರದಲ್ಲಿರುವ ಜಖೈನಿ ಮತ್ತು ಚೆನಾನಿ ನಡುವೆ ಭೂಕುಸಿತದಿಂದ ಹಾನಿಗೊಳಗಾಗಿದೆ.
ಮೊಘಲ್ ರಸ್ತೆ ತೆರೆದಿದ್ದರೂ, ಅಧಿಕಾರಿಗಳು ಭಾರೀ ವಾಹನಗಳಿಗೆ ಅಲ್ಲಿ ಸಂಚಾರ ನಡೆಸಲು ಬಿಡುತ್ತಿಲ್ಲ. ಸೇಬು ಮತ್ತು ಪೇರಳೆ ಕೊಯ್ಲು ಋತು ಈಗ ಆಗಿದ್ದರೂ ಪ್ರಾಕೃತಿಕ ವಿಕೋಪ ಬೆಳೆಗಾರರಿಗೆ ಭಾರೀ ನಷ್ಟವನ್ನುಂಟುಮಾಡಿದೆ. ಪ್ರತಿ ಟ್ರಕ್ 5 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಹಣ್ಣುಗಳನ್ನು ಸಾಗಿಸುತ್ತದೆ.
ಸದ್ಯ ರಸ್ತೆ ತೆರೆಯದ ಕಾರಣ ಬೆಳೆಗಾರರು ಕಣ್ಣೀರಿಟ್ಟಿದ್ದಾರೆ. ಇಟ್ಟ ಜಾಗದಲ್ಲಿಯೇ ಇದ್ದರೆ ಹಣ್ಣುಗಳು ಕೂಡ ಕೊಳೆತುಹೋಗುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.