ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಾಣಿಗಳಿಗೆ ಪ್ರೀತಿ ತೋರಿಸಿದರೆ ಅವು ಪ್ರಾಣವನ್ನೂ ಲೆಕ್ಕಿಸದೆ ಮಾಲಕನನ್ನು ರಕ್ಷಿಸುತ್ತದೆ. ಅದರಲ್ಲೂ ನಾಯಿ ಒಂದು ಹೆಜ್ಜೆ ಮುಂದೆ ಅಂದರೆ ತಪ್ಪಾಗಲಾರದು.
ನಾಯಿ ತನಗೆ ಕೊಂಚ ಪ್ರೀತಿ ತೋರಿದರೂ, ಒಂದು ತುತ್ತು ಅನ್ನ ಹಾಕಿದರೂ ಅವರನ್ನು ಸಾಯೋವರೆಗೂ ಮರೆಯುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೌರ್‌ನಲ್ಲಿ ಹೃದಯಸ್ಪರ್ಶಿ ಘಟನೆಯೊಂದು ಕಂಡು ಬಂದಿದೆ.
ಹಿಮಾಚಲ ಪ್ರದೇಶಕ್ಕೆ ಹೋಗಿದ್ದ ಅಣ್ಣ-ತಮ್ಮಂದಿರಿಬ್ಬರು ತಮ್ಮ ಜೊತೆಗೆ ಸಾಕುನಾಯಿಯಾದ ಪಿಟ್ ಬುಲ್ ಅನ್ನು ಕೂಡ ಕರೆದುಕೊಂಡು ಹೋಗಿದ್ದರು. ಅಲ್ಲಿ ರೀಲ್ಸ್ ಮಾಡುತ್ತಿದ್ದಾಗ ಹಿಮಪಾತವಾಗಿತ್ತು. ಇದರಿಂದ ಆ ಇಬ್ಬರು ಹಿಮದಡಿ ಸಿಲುಕಿ ಮೃತಪಟ್ಟಿದ್ದರು. ಆದರೆ ನಿಷ್ಠಾವಂತ ಪಿಟ್‌ಬುಲ್ ಶ್ವಾನವೊಂದು ತನ್ನ ಮೃತ ಮಾಲಕನ ಪಕ್ಕದಲ್ಲಿ ನಾಲ್ಕು ದಿನಗಳ ಕಾಲ ಇದ್ದು,ಕಾಯುತ್ತಾ ನಿಂತಿತ್ತು ಈ ವಿಡಿಯೊವೊಂದು ನೋಡುಗರನ್ನು ಮೂಕರನ್ನಾಗಿಸಿದೆ.
ಭರ್ಮೌರ್‌ನ ಭರ್ಮಣಿ ದೇವಸ್ಥಾನದ ಬಳಿ ವಿಕ್ಷಿತ್ ರಾಣಾ ಮತ್ತು ಪಿಯೂಷ್ ಎಂಬ ಇಬ್ಬರು ಯುವಕರು ಕಾಣೆಯಾಗಿದ್ದು, ನಂತರ ಅವರು ಹವಾಮಾನ ವೈಪರೀತ್ಯದ ನಡುವೆ ಹಿಮದಲ್ಲಿ ಸಿಲುಕಿಕೊಂಡು ಸಾವನ್ನಪ್ಪಿರುವುದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ರಕ್ಷಣಾ ತಂಡಗಳು ಮತ್ತು ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ತಲುಪಿದಾಗ ಹೃದಯ ವಿದ್ರಾವಕ ದೃಶ್ಯ ಕಂಡು ಬಂದಿದೆ. ಮೈ ಕೊರೆಯುವ ಚಳಿಯಲ್ಲೂ ಕೂಡ ನಾಯಿ ತನ್ನ ಮೃತ ಯಜಮಾನನನ್ನು ಬಿಟ್ಟು ಕದಲದೆ ಅಲ್ಲೇ ಪಕ್ಕದಲ್ಲಿ ಕುಳಿತುಕೊಂಡಿದೆ.
ಸತತ 4 ದಿನಗಳ ಕಾಲ ಆಹಾರ, ನೀರಿಲ್ಲದೆ ಆ ಶ್ವಾನ ಅಲ್ಲಿಯೇ ಇತ್ತು. ಕೊರೆಯುವ ಚಳಿ ಮತ್ತು ಬೃಹತ್ ಗಾಳಿಯೊಂದಿಗೆ ಹೋರಾಡುತ್ತ, ನಾಯಿ ಕಾವಲು ಕಾಯುತ್ತಾ ಕಾಡು ಪ್ರಾಣಿಗಳಿಂದ ತನ್ನ ಮಾಲಕನ ದೇಹವನ್ನು ರಕ್ಷಿಸಿದೆ.
ರಕ್ಷಣಾ ತಂಡ ಮೃತದೇಹವನ್ನು ಕೊಂಡೊಯ್ಯಲು ಬಂದಾಗ ತನ್ನ ಯಜಮಾನನನ್ನು ಯಾರೋ ಎತ್ತಿ ಕೊಂಡು ಹೋಗುತ್ತಿದ್ದಾರೆ ಎಂದು ಭಾವಿಸಿ ನಾಯಿ ಬೊಗಳತೊಡಗಿದೆ. ನಂತರ ರಕ್ಷಣಾ ಸಿಬ್ಬಂದಿ ನಾಯಿಯನ್ನು ಪ್ರೀತಿಯಿಂದ ಸವರಿ ಸಮಾಧಾನ ಪಡಿಸಿದ್ದಾರೆ. ಆ ಬಳಿಕವಷ್ಟೇ ಮೃತದೇಹವನ್ನು ಅಲ್ಲಿಂದ ಸ್ಥಳಾಂತರಿಸಲು ಶ್ವಾನ ಅವಕಾಶ ನೀಡಿತು.
ಈ ಹೃದಯಸ್ಪರ್ಶಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಶ್ವಾನದ ನಿಷ್ಠೆಗೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಷ್ಠಾವಂತ ಸಾಕುಪ್ರಾಣಿಯ ವರ್ತನೆ ಅನೇಕರ ಹೃದಯ ಮುಟ್ಟಿದೆ.



