ಹೊಸ ದಿಗಂತ ವರದಿ,ಚಿತ್ರದುರ್ಗ:
ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಮಾ.೧೧ ರಂದು ಬೆಳಿಗ್ಗೆ ೧೦ ಗಂಟೆಯಿಂದ ಹರಿಹರದಲ್ಲಿರುವ ಪ್ರೊ.ಬಿ.ಕೃಷ್ಣಪ್ಪ ಅವರ ಮುಕ್ತಿ ಸ್ಥಳದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯೂರು ತಾಲ್ಲೂಕು ಕೋಡಿಹಳ್ಳಿ ಆದಿಜಾಂಬವ ಮಠದ ಷಡಾಕ್ಷರಿಮುನಿ ಸ್ವಾಮೀಜಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಿತರು ಹಾಗೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಜನಾಂಗದವರ ಹಕ್ಕುಗಳ ರಕ್ಷಣೆ ಮಾಡಬೇಕಾದ ಸರ್ಕಾರ ಅವರನ್ನು ನಿರಂತರವಾಗಿ ವಂಚಿಸುತ್ತಾ ಬಂದಿದೆ. ಮಾದಿಗ ಸಮುದಾಯ ಒಳ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ಕೊಡಿ ಎಂದು ಕಳೆದ ೩೫ ವರ್ಷಗಳಿಂದ ಇಲ್ಲಿಯವರೆಗೆ ಹೋರಾಟ ನಡೆಸುತ್ತಾ ಬಂದಿದೆ. ಆದರೂ ಸಮುದಾಯದ ನ್ಯಾಯಬದ್ದ ಹೋರಾಟವನ್ನು ಕಡೆಗಣಿಸುತ್ತಾ ಮೀಸಲಾತಿ ನೀಡದೆ ಕಾಲ ದೂಡುತ್ತಾ ಬಂದಿದೆ ಎಂದರು.
ಚುನಾವಣೆಗೆ ಮೊದಲು ಒಳ ಮೀಸಲಾತಿ ಜಾರಿಗೆ ಬದ್ಧ ಎಂದು ಕಾಂಗ್ರೇಸ್ ಪಕ್ಷ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಮೀಸಲಾತಿ ಕಡಿತ ಮಾಡಿ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಇದು ಮಾದಿಗ ಜನಾಂಗದ ಪಾಲಿಗೆ ಮರಣ ಶಾಸನ ಬರೆದಂತಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರ ಮಾದಿಗರಿಗೆ ಒಳ ಮೀಸಲಾತಿ ನೀಡುವ ಬಗ್ಗೆ ಅನುಮಾನ ಮೂಡಿದೆ. ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಮಾದಿಗ ಜನಾಂಗಕ್ಕೆ ಅನ್ಯಾಯ ಮಾಡಿದೆ. ಒಳ ಮೀಸಲಾತಿ ಅನ್ವಯ ರಾಜ್ಯ ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿದರು.
ಈ ಪಾದಯಾತ್ರೆಯಲ್ಲಿ ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಐಮಂಗಲದ ಶ್ರೀ ಶಿವಶರಣ ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ, ಮಾತಂಗ ಗುರುಪೀಠದ ಪೂರ್ಣಾನಂದ ಭಾರತಿ ಸ್ವಾಮೀಜಿ, ಮಾಗಡಿಯ ಪಾಲನಹಳ್ಳಿ ಮಠದ ಡಾ.ಸಿದ್ದರಾಜು ಸ್ವಾಮೀಜಿ ಹಾಗೂ ಸಮುದಾಯದ ಉತ್ತರ ಕರ್ನಾಟಕ ಭಾಗದ ವಿವಿಧ ಮಠಾಧೀಶರು ಈ ಪಾದಯಾತ್ರೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಪಾದಯಾತ್ರೆಯಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿ ಮುಖಂಡರು, ದಲಿತಪರ ಸಂಘಟನೆಗಳ ಹೋರಾಟಗಾರರು, ಸಮಾಜದ ಜನಪ್ರತಿನಿಧಿಗಳು ಸೇರಿದಂತೆ ಸಮುದಾಯದ ಎಲ್ಲ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸಮುದಾಯದ ನ್ಯಾಯಕ್ಕಾಗಿ ನಡೆಸುತ್ತಿರುವ ಹಕ್ಕೊತ್ತಾಯದ ಈ ಪಾದಯಾತ್ರೆಯಲ್ಲಿ ಮಾರ್ಗದುದ್ದಕ್ಕೂ ಹೋರಾಟದಲ್ಲಿ ಒಳ ಮೀಸಲಾತಿ ಹೋರಾಟಗಾರರು, ವಿದ್ಯಾರ್ಥಿಗಳು, ಯುವ ಜನರು ಸೇರಿದಂತೆ ಎಲ್ಲರೂ ಪಾಲ್ಗೊಳ್ಳಬೇಕೆಂದು ಕೋರಿದರು. ಪಾದಯಾತ್ರೆ ಕೊನೆಗೊಂಡ ನಂತರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.



