ಹೊಸದಿಗಂತ ಡಿಜಿಟಲ್ ಡೆಸ್ಕ್;
ಪಹಲ್ಗಾಮ್‌ನಲ್ಲಿ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ ಘಟನೆಯ ನಂತರ ಭಾರತ ಮತ್ತು ಪಾಕ್ ನಡುವೆ ಸಂಘರ್ಷ ಹೆಚ್ಚಾಗತೊಡಗಿದೆ. ಭಾರತದ ಬಗ್ಗೆ ‘ಸುಳ್ಳು, ಪ್ರಚೋದನಕಾರಿ ಮತ್ತು ಕೋಮು ಭಾವನೆ ಕೆರಳಿಸುವ’ ಸುದ್ದಿಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳನ್ನು ಈಗಾಗಲೇ ಕೇಂದ್ರ ಸರ್ಕಾರ ನಿಷೇಧಿಸಿದೆ. ಇದೀಗ ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ, ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.
ನದೀಮ್ ದಾಳಿಯ ಕುರಿತು ಯಾವುದೇ ಪೋಸ್ಟ್ ಅಥವಾ ಪ್ರತಿಕ್ರಿಯೆ ನೀಡದಿದ್ದರೂ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ತೆರೆದಾಗ ‘ಕಾನೂನು ಸೂಚನೆಯ ಮೇರೆಗೆ ಖಾತೆ ತಡೆಹಿಡಿಯಲಾಗಿದೆ’ ಎಂದು ತೋರಿಸುತ್ತಿದೆ.
ಈಗಾಗಲೇ ಕ್ರಿಕೆಟಿಗ ಶೋಯೆಬ್ ಅಖ್ತರ್, ಶಾಹೀದ್ ಅಫ್ರಿದಿ ಅವರ ಯೂಟ್ಯೂಬ್ ಚಾನೆಲ್‌ಗಳು ಆರಂಭಿಕ ಹಂತದಲ್ಲಿ ನಿಷೇಧಿಸಲಾಗಿತ್ತು. ಇದೀಗ ನದೀಮ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿರ್ಬಂಧಿಸಲಾಗಿದೆ.