ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ್ ನಡುವಿನ ಗಡಿ ಪ್ರದೇಶದಲ್ಲಿ ಉಂಟಾದ ಮಿಲಿಟರಿ ಸಂಘರ್ಷವು ಈಗ ಕ್ರಿಕೆಟ್ ಮೇಲೂ ತೀವ್ರ ಪರಿಣಾಮ ಬೀರಿದೆ. ಇತ್ತೀಚೆಗೆ ನಡೆದ ವೈಮಾನಿಕ ದಾಳಿಗಳಿಂದ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಗಂಭೀರ ಹಂತಕ್ಕೆ ತಲುಪಿದ್ದು, ಇದರ ಪ್ರತಿಫಲ ಕ್ರಿಕೆಟ್ ಕ್ಷೇತ್ರದಲ್ಲೂ ಕಾಣಿಸಿಕೊಳ್ಳುತ್ತಿದೆ.
ವರದಿಗಳ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಯೋಜಿಸಲು ಉದ್ದೇಶಿಸಿರುವ ಮೂರು ರಾಷ್ಟ್ರಗಳ ಟಿ20 ತ್ರಿಕೋನ ಸರಣಿಯಲ್ಲಿ ಅಫ್ಘಾನಿಸ್ತಾನ್ ತಂಡದ ಭವಿಷ್ಯ ಈಗ ಅನುಮಾನದಲ್ಲಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ತೀವ್ರವಾದ ಗಡಿ ಸಂಘರ್ಷದ ಹಿನ್ನೆಲೆ, ಪಿಸಿಬಿ ಅಫ್ಘಾನ್ ತಂಡವನ್ನು ಸರಣಿಯಿಂದ ಹೊರಗಿಡುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನಿ ವಾಯುಪಡೆಯು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಪ್ರದೇಶದ ಮೇಲೆ ದಾಳಿ ನಡೆಸಿದ ನಂತರ ಎರಡೂ ದೇಶಗಳ ನಡುವಿನ ಡ್ಯುರಾಂಡ್ ರೇಖೆಯ ಗಡಿಯಲ್ಲಿ ನಿರಂತರ ಹೋರಾಟಗಳು ನಡೆಯುತ್ತಿವೆ. ಈ ಪರಿಸ್ಥಿತಿ ರಾಜಕೀಯ ಮತ್ತು ಭದ್ರತಾ ಮಟ್ಟದಲ್ಲಿ ಗಂಭೀರವಾಗುತ್ತಿರುವಂತೆಯೇ, ಕ್ರೀಡಾ ಸಂಬಂಧಗಳು ಸಹ ಹದಗೆಡುವ ಲಕ್ಷಣಗಳು ಗೋಚರಿಸುತ್ತಿವೆ.
ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಯಾವ ರೀತಿಯ ಸಂದರ್ಭದಲ್ಲಾದರೂ ಸರಣಿಯನ್ನು ನಿರ್ವಹಿಸಲೇಬೇಕೆಂಬ ದೃಢಸಂಕಲ್ಪ ಹೊಂದಿದ್ದು, ಪರ್ಯಾಯ ತಂಡಗಳನ್ನು ಆಹ್ವಾನಿಸುವ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಇದರಿಂದ ನವೆಂಬರ್‌ನಲ್ಲಿ ನಡೆಯಲಿರುವ ಪಾಕಿಸ್ತಾನ, ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಭಾಗವಹಿಸಬೇಕಿದ್ದ ತ್ರಿಕೋನ ಸರಣಿಯಿಂದ ಅಫ್ಘಾನಿಸ್ತಾನ್ ತಂಡವನ್ನು ಬದಲಾಯಿಸುವ ಸಾಧ್ಯತೆ ಹೆಚ್ಚು ಎಂದು ತಿಳಿದುಬಂದಿದೆ.
ಅಫ್ಘಾನ್ ತಂಡವನ್ನು ಸರಣಿಯಿಂದ ಹೊರಗಿಟ್ಟರೆ, ಪಾಕ್–ಅಫ್ಘಾನ್ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಮುಂದಿನ ಕೆಲವು ವಾರಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.