ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಬ್ಜಿ ಪ್ರೇಮಿಗಾಗಿ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ (Seema Haider) ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಓಡಿಬಂದು ವಿಚಾರ ಗೊತ್ತೇ ಇದೆ.
ಇದೀಗ ಅದೇ ರೀತಿ ಮತ್ತೊಂದು ಕೇಸ್ ಬೆಳಕಿಗೆ ಬಂದಿದ್ದು, ತನ್ನ ಪ್ರೇಮಿಯನ್ನ ಹುಡುಕಿಕೊಂಡು ಅಕ್ರಮವಾಗಿ ಭಾರತವನ್ನ ಬಾಂಗ್ಲಾದೇಶದ (Bangladesh) ಯುವತಿ ಪ್ರವೇಶಿಸಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಬಾಂಗ್ಲಾದೇಶದ ಜೆಸ್ಸೋರ್ ಮೂಲದ ಸಪ್ಲಾ ಅಖ್ತರ್ ಯುವತಿ ತನ್ನ ಪ್ರಿಯಕರನನ್ನ ಭೇಟಿಯಾಗಲು ಅಂತಾರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇರೆಗೆ ಸಿಲಿಗುರಿ ಕಮಿಷನರೇಟ್ ವ್ಯಾಪ್ತಿಯ ಪ್ರಧಾನನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಕೆಗೆ ಪಬ್ಜಿ ಗೇಮ್ ಆಡುವ ವೇಳೆ ಭಾರತ ಮೂಲದ ಯುವಕನ ಪರಿಚಯವಾಗಿ ಇಬ್ಬರ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿ ಕಳೆದ ಎರಡೂವರೆ ತಿಂಗಳಿಂದ ಪ್ರತಿದಿನ ಫೋನ್ ಸಂಪರ್ಕದಲ್ಲಿದ್ದರು.
ಇಲ್ಲಿ ಯುವತಿ ಜೀವನೋಪಾಯಕ್ಕಾಗಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಇದೇ ಸಂದರ್ಭ ಯುವತಿಗೆ ತನ್ನ ಪ್ರಿಯಕರ ಮೋಸ ಮಾಡಿ ತನ್ನನ್ನು ನೇಪಾಳಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದಾನೆ ಎಂಬ ವಿಷಯ ಗೊತ್ತಾಗಿದೆ. ಕೂಡಲೇ ಪ್ರಿಯಕರನಿಂದ ತಪ್ಪಿಸಿಕೊಂಡು ಸಿಲಿಗುರಿ ಪಟ್ಟಣದಲ್ಲಿ ರಾತ್ರಿಯೆಲ್ಲ ಸುತ್ತಾಡಿದ್ದಾಳೆ. ಇದನ್ನು ಕಂಡ ಸ್ವಯಂಸೇವಾ ಸಂಸ್ಥೆಯೊಂದರ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬುಧವಾರ ರಾತ್ರಿ ಸಿಲಿಗುರಿ ಜಂಕ್ಷನ್ ಪ್ರದೇಶದಲ್ಲಿ ಆಕೆ ಗೊತ್ತು ಗುರಿಯಿಲ್ಲದೆ ಓಡಾಡುತ್ತಿದ್ದಳು. ಎನ್‌ಜಿಒ ಒಂದು ಆಕೆಯನ್ನು ಗಮನಿಸಿ, ಕಂಗಾಲಾಗಿದ್ದ ಆಕೆಯನ್ನು ಮಾತನಾಡಿಸಿದೆ. ಬಳಿಕ ಯುವತಿಯನ್ನು ಪ್ರಧಾನ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಒಪ್ಪಿಸಿದ್ದಾರೆ.
ಇನ್ನು ಸಪ್ಲಾಳ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ಆಕೆಗೆ ಕೈಕೊಟ್ಟಿರುವ ಪ್ರಿಯಕರನಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.