ಕಾಲೇಜು ವಾಟ್ಸ್ ಆಪ್ ಗುಂಪಿನಲ್ಲಿ ಪಾಕ್ ಧ್ವಜದ ಚಿತ್ರ ಹಾಕಿದ ವಿದ್ಯಾರ್ಥಿಗಳು: ಕೂಡಲೇ ಅಮಾನತಿಗೆ ಎಬಿವಿಪಿ ಆಗ್ರಹ

ಹೊಸದಿಗಂತ ವರದಿ,ಶಿವಮೊಗ್ಗ:

ಕಾಲೇಜು ವಿದ್ಯಾರ್ಥಿಗಳಿರುವ ವಾಟ್ಸಪ್ ಗುಂಪಿನಲ್ಲಿ ಪಾಕಿಸ್ಥಾನ ದೇಶದ ಧ್ವಜದ ಚಿತ್ರ ಹಾಕಿರುವ ವಿದ್ಯಾರ್ಥಿಗಳನ್ನು ಕೂಡಲೇ ತರಗತಿಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸಹ್ಯಾದ್ರಿ ಕಾಲೇಜಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಬಿಸಿಎ ತರಗತಿ ವಿದ್ಯಾರ್ಥಿಗಳ ವಾಟ್ಸಪ್ ಗುಂಪಿನಲ್ಲಿ ಚರ್ಚೆ ಮಧ್ಯೆ ಕೆಲ ವಿದ್ಯಾರ್ಥಿಗಳು ಪಾಕಿಸ್ಥಾನದ ಧ್ವಜದ ಚಿತ್ರ ಹಾಕಿದ್ದಾರೆ. ಈ ಸಂಬಂಧ ಒಂದು ತಿಂಗಳ ಹಿಂದೆಯೇ ದೂರು ನೀಡಲಾಗಿತ್ತು. ಆದರೂ ಕಾಲೇಜು ಆಡಳಿತ ವೌನ ವಹಿಸಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ತಿಂಗಳೇ ಈ ಕುರಿತು ಮನವಿ ಸಲ್ಲಿಸಿ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಕೂಡಲೇ ಆ ವಿದ್ಯಾರ್ಥಿಗಳನ್ನು ತರಗತಿಯಿಂದ ಅಮಾನತು ಮಾಡಬೇಕು. ಅವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕಾಲೇಜಿನ ಪ್ರಾಂಶುಪಾಲರದ ಪ್ರೊ. ವಾಗ್ದೇವಿ ಸ್ಥಳಕ್ಕೆ ಆಗಮಿಸಿ ಮನವಿ ಆಲಿಸಿದರು. ಘಟನೆ ಸಂಬಂಧ ಕುವೆಂಪು ವಿವಿ ಜೊತೆ ಕಾನೂನು ಸಲಹೆ ಪಡೆಯಲಾಗುತ್ತಿದೆ. ನಂತರ ಕ್ರಮದ ಬಗ್ಗೆ ಆಲೋಚಿಸಲಾಗುವುದು ಎಂದು ತಿಳಿಸಿದರು. ಇದಕ್ಕೆ ಆಕ್ಷೇಪಿಸಿದ ವಿದ್ಯಾರ್ಥಿಗಳು, ಕುವೆಂಪು ವಿವಿ ಕುಲಪತಿಗಳೇ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು.
ಬಳಿಕ ಕುವೆಂಪು ವಿವಿ ಡೆಪ್ಯೂಟಿ ರಿಜಿಸ್ಟ್ರಾರ್ ಕುಮಾರಸ್ವಾಮಿ ಮತ್ತು ವಿದ್ಯಾರ್ಥಿ ಸಮನ್ವಯ ಸಮಿತಿ ಅಧ್ಯಕ್ಷ ಬಿರಾದಾರ್ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಘಟನೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಧನುಷ್ ಗೌಡ, ರಾಜ್ಯ ಸಹ ಕಾರ್ಯದರ್ಶಿ ಸ್ವಾತಿ, ವಿಜಯ್, ಚಂದ್ರಶೇಖರ್, ರೇವತಿ, ಪ್ರಜ್ಞಾ, ಲೋಹಿತ್ ಇನ್ನಿತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!