ಹೊಸದಿಗಂತ ಡಿಜಿಟಲ್ ಡೆಸ್ಕ್:
ಏರ್ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾಂಪ್‌ಬೆಲ್ ವಿಲ್ಸನ್ ಅವರು, ಪಾಕಿಸ್ತಾನದ ಕಾರಣದಿಂದಾಗಿ ಸಂಸ್ಥೆಯು 4,000 ಕೋಟಿಗೂ ಅಧಿಕ ನಷ್ಟ ಅನುಭವಿಸಿದೆ ಎಂದು ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ನಷ್ಟಕ್ಕೆ ಕಾರಣ: ವಾಯುಪ್ರದೇಶ ಬಂದ್
ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಈ ಸಂಘರ್ಷದ ಹಿನ್ನೆಲೆಯಲ್ಲಿ ಎರಡೂ ದೇಶಗಳು ತಮ್ಮ ವಾಯುಪ್ರದೇಶವನ್ನು ಮುಚ್ಚಿದ್ದವು. ಇದರಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳ ಮೇಲೆ ತೀವ್ರ ಪರಿಣಾಮ ಬೀರಿತು. ಈ ಪೈಕಿ ಏರ್ ಇಂಡಿಯಾ ಒಂದೇ ಸಂಸ್ಥೆಯು ₹4,000 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದೆ ಎಂದು ವಿಲ್ಸನ್ ಮಾಹಿತಿ ಹಂಚಿಕೊಂಡಿದ್ದಾರೆ.
ವಿಮಾನ ಮಾರ್ಗ ಬದಲಾವಣೆ, ವೆಚ್ಚ ಹೆಚ್ಚಳ
ಸಂಘರ್ಷದ ನಂತರ ಪಾಕಿಸ್ತಾನ ತನ್ನ ವಾಯುಸೀಮೆಯನ್ನು ನಿರಂತರವಾಗಿ ಮುಚ್ಚಿದ ಕಾರಣ ಏರ್ ಇಂಡಿಯಾವು ಅನೇಕ ಅಂತರರಾಷ್ಟ್ರೀಯ ವಿಮಾನಗಳ ಮಾರ್ಗಗಳನ್ನು ಬದಲಾಯಿಸಬೇಕಾಯಿತು. ಮಾರ್ಗ ಬದಲಾವಣೆಯಿಂದಾಗಿ ಸಂಸ್ಥೆಯ ಕಾರ್ಯಾಚರಣೆಯ ವೆಚ್ಚಗಳು ಹೆಚ್ಚಳವಾದವು ಮತ್ತು ನಿರಂತರವಾಗಿ ನಷ್ಟವನ್ನು ಅನುಭವಿಸಬೇಕಾಯಿತು.
ಮುಖ್ಯವಾಗಿ ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಹೋಗುವ ವಿಮಾನ ಮಾರ್ಗಗಳಿಗೆ ಹೆಚ್ಚಿನ ಪರಿಣಾಮ ಬೀರಿತು. ಮಾರ್ಗ ಬದಲಾವಣೆಯಿಂದಾಗಿ ಪ್ರಯಾಣದ ಸಮಯ 60 ರಿಂದ 90 ನಿಮಿಷಗಳಷ್ಟು ಹೆಚ್ಚಾಯಿತು. ಇದರ ಜೊತೆಗೆ ಸಿಬ್ಬಂದಿ ವೆಚ್ಚ ಕೂಡಾ ಏರಿಕೆಯಾಗಿದ್ದು, ನಷ್ಟಕ್ಕೆ ಮತ್ತೊಂದು ಕಾರಣ ಎಂದು ಕ್ಯಾಂಪ್‌ಬೆಲ್ ವಿಲ್ಸನ್ ವಿವರಿಸಿದ್ದಾರೆ.

