ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ದಾಳಿ ಬೆನ್ನಿಗೆ ಉಭಯ ರಾಷ್ಟ್ರಗಳ ನಡುವೆ ಯುದ್ಧದ ಕಾರ್ಮೋಡ ಕವಿಯುತ್ತಿದ್ದು, ಈ ನಡುವೆ ಬೆಂಕಿಗೆ ತುಪ್ಪ ಸುರಿಯುವಂತೆ ರಷ್ಯಾದ ಪಾಕಿಸ್ತಾನದ ರಾಯಭಾರಿ ಮುಹಮ್ಮದ್ ಖಾಲಿದ್ ಜಮಾಲಿ ಹೇಳಿಕೆ ನೀಡಿದ್ದಾರೆ!
ಭಾರತ ಮಿಲಿಟರಿ ಕಾರ್ಯಾಚರಣೆ ಕೈಗೊಂಡರೆ ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳ ಸಹಿತ ತನ್ನ ಎಲ್ಲಾ ಶಕ್ತಿಯನ್ನು ಪ್ರಯೋಗಿಸಲಿದೆ ಎಂದು ಬೆದರಿಕೆ ಹಾಕಿದ್ದಾರೆ.
ರಷ್ಯಾದ ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಜಮಾಲಿ, ಭಾರತದ ಮಾಧ್ಯಮಗಳು, ಸರ್ಕಾರದ ಕಡೆಯಿಂದ ಬರುತ್ತಿರುವ ಬೇಜವಾಬ್ದಾರಿ ಹೇಳಿಕೆ ನಮ್ಮನ್ನು ಪ್ರಚೋದಿಸುತ್ತಿವೆ. ಈ ನಡುವೆ ಪಾಕಿಸ್ತಾನದ ಕೆಲವು ಪ್ರದೇಶಗಳ ಮೇಲೆ ದಾಳಿ ಮಾಡಲು ನಿರ್ಧರಿಸಿರುವ ಬಗೆಗಿನ ಕೆಲವು ದಾಖಲೆಗಳು ಸೋರಿಕೆಯಾಗಿವೆ. ಇವು ಮುಂಬರುವ ದಿನಗಳಲ್ಲಿ ಸಂಘರ್ಷ ಸಂಭವಿಸಬಹುದು ಎಂಬುದಕ್ಕೆ ಸಾಕ್ಷಿ. ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಖ್ಯಾ ಬಲದ ಅಪ್ರಸ್ತುತ. ನಾವು ಸಾಂಪ್ರದಾಯಿಕ ಹಾಗೂ ಪರಮಾಣು ಎರಡೂ ಶಕ್ತಿಯ ಸಂಪೂರ್ಣ ಬಲಪ್ರಯೋಗವನ್ನು ಮಾಡುತ್ತೇವೆ. ಇದಲ್ಲದೆ ಪಾಕಿಸ್ತಾನದ ಸಶಸ್ತ್ರ ಪಡೆಗಳು, ಅದರ ಜನರ ಬೆಂಬಲದೊಂದಿಗೆ, ಶಕ್ತಿಯ ಪೂರ್ಣ ಬಲವನ್ನು ಬಳಸಿಕೊಂಡು ಪ್ರತೀಕಾರ ತೀರಿಸಿಕೊಳ್ಳುತ್ತವೆ ಎಂದು ಹೇಳಿದ್ದಾರೆ.