ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಯುವ ವೇಗದ ಬೌಲರ್ ನಸೀಮ್ ಶಾ ಮನೆ ಮೇಲೆ ನಡೆದ ಗುಂಡಿನ ದಾಳಿಯು ಈಗ ಪಾಕಿಸ್ತಾನ ಕ್ರಿಕೆಟ್ ವಲಯದಲ್ಲಿ ದೊಡ್ಡ ಆತಂಕವನ್ನುಂಟುಮಾಡಿದೆ. ಖೈಬರ್ ಪಖ್ತೂನ್‌ಖ್ವಾದ ಲೋವರ್ ದಿರ್ ಪ್ರದೇಶದಲ್ಲಿರುವ ಅವರ ನಿವಾಸದ ಮೇಲೆ ಭಾನುವಾರ ತಡ ರಾತ್ರಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಅಜ್ಞಾತರು ಮನೆಯನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದು, ಮನೆಯ ಕಿಟಕಿಗಳು, ಮುಖ್ಯ ದ್ವಾರ ಹಾಗೂ ಪಾರ್ಕಿಂಗ್ ಪ್ರದೇಶ ಹಾನಿಗೊಂಡಿವೆ.
ದಾಳಿಯ ಸಮಯದಲ್ಲಿ ನಸೀಮ್ ಶಾ ಪೋಷಕರು ಮತ್ತು ಕೆಲ ಕುಟುಂಬ ಸದಸ್ಯರು ಮಾತ್ರ ಮನೆಯಲ್ಲಿದ್ದರು. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಮತ್ತು ಎಲ್ಲರೂ ಸುರಕ್ಷಿತವಾಗಿದ್ದಾರೆ. ಘಟನೆ ಬಳಿಕ ಸ್ಥಳೀಯ ಪೊಲೀಸರು ತುರ್ತು ಕ್ರಮವಾಗಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ಪ್ರಾರಂಭಿಸಿದ್ದಾರೆ. ನಸೀಮ್ ಶಾ ಅವರ ಮನೆಯಲ್ಲಿ ಹೆಚ್ಚುವರಿ ಭದ್ರತೆಯನ್ನೂ ಒದಗಿಸಲಾಗಿದೆ.
ದಾಳಿಯ ವೇಳೆಗೆ ನಸೀಮ್ ಶಾ ಪಾಕಿಸ್ತಾನ ಕ್ರಿಕೆಟ್ ತಂಡದೊಂದಿಗೆ ರಾವಲ್ಪಿಂಡಿಯಲ್ಲಿ ಅಭ್ಯಾಸದಲ್ಲಿದ್ದರು. ಅವರು ನವೆಂಬರ್ 11 ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಪ್ರಕರಣದ ಹಿಂದಿರುವ ಉದ್ದೇಶ ಇನ್ನೂ ಸ್ಪಷ್ಟವಾಗದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

