ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಮತ್ತೆ ಕೋಲಾಹಲ ಸೃಷ್ಟಿಯಾಗಿದೆ. ಆಪರೇಷನ್ ಸಿಂದೂರ ಬಳಿಕ ಪಾಕಿಸ್ತಾನದ ಲಾಹೋರ್‌ನಲ್ಲಿ ಮೂರು ಸ್ಪೋಟಗಳು ಸಂಭವಿಸಿವೆ.
ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ, ಲಾಹೋರ್‌ನಲ್ಲಿ ಡ್ರೋನ್ ಮೂಲಕ ದಾಳಿ ನಡೆದಿದೆ. ಲಾಹೋರ್ ವಿಮಾನ ನಿಲ್ದಾಣಗಳ ಬಳಿ ನಡೆದ ಸ್ಫೋಟದ ಸದ್ದು ಕಿಲೋಮೀಟರ್ ದೂರವರೆಗೆ ಕೇಳಿಸಿದೆ. ಈ ಸ್ಪೋಟದ ನಂತರ ಸುತ್ತಮುತ್ತಲಿನ ಪ್ರದೇಶದಲ್ಲಿ ಸೈರನ್ ಸದ್ದು ಮೊಳಗಿದೆ ಎಂದು ಅಲ್ಲಿನ ಪೊಲೀಸರೇ ದೃಢಪಡಿಸಿದ್ದಾರೆ. ಸ್ಫೋಟದ ಬಳಿಕ ಜನರು ಭಯದಿಂದ ಓಡಿ ಹೋಗುತ್ತಿರುವ ಮತ್ತು ಹೊಗೆ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಪಾಕಿಸ್ತಾನದ ಪೊಲೀಸರು ಮತ್ತು ಅಧಿಕಾರಿಗಳು ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಲಾಹೋರ್‌ನ ಗೋಪಾಲನಗರ ಮತ್ತು ನಾಸಿರಾಬಾದ್ ಪ್ರದೇಶ ಹಾಗೂ ವಾಲ್ಟನ್ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸ್ಫೋಟದ ಸದ್ದು ಕೇಳಿದೆ. ಸ್ಫೋಟದ ಸದ್ದು ಕೇಳುತ್ತಿದ್ದಂತೆ ಜನರು ಭಯದಿಂದ ಮನೆಗಳಿಂದ ಹೊರ ಬಂದಿದ್ದಾರೆ. ಕೆಲವರು ದಟ್ಟವಾದ ಹೊಗೆ ನೋಡಿರೋದಾಗಿಯೂ ಹೇಳಿದ್ದಾರೆ.