ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಚುನಾವಣೆಯಲ್ಲಿ 265 ಸ್ಥಾನಗಳ ಪೈಕಿ ಕೇವಲ 12 ಸ್ಥಾನಗಳ ಫಲಿತಾಂಶವನ್ನು ಮಾತ್ರ ಅಧಿಕೃತವಾಗಿ ಘೋಷಿಸಲಾಗಿದೆ.
ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಬೆಂಬಲಿತ ಸ್ವತಂತ್ರರು ದೇಶಾದ್ಯಂತ ಹಲವಾರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಿಎಂಎಲ್-ಎನ್ ಗೆ ತನ್ನ ಭದ್ರಕೋಟೆಯಾದ ಪಂಜಾಬ್ ನಲ್ಲಿ ಕಠಿಣ ಸವಾಲನ್ನು ನೀಡಿದ್ದಾರೆ.
ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಇಮ್ರಾನ್ ಖಾನ್ ಬೆಂಬಲಿತ ಅಭ್ಯರ್ಥಿಗಳು ಐದು ಸ್ಥಾನಗಳನ್ನು ಗೆದ್ದರೆ, ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಕ್ಷವಾದ ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್) (ಪಿಎಂಎಲ್-ಎನ್) ನಾಲ್ಕು ಸ್ಥಾನಗಳನ್ನು ಗೆದ್ದಿದೆ.ಹತ್ಯೆಗೀಡಾದ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪುತ್ರ ಬಿಲಾವಲ್ ಭುಟ್ಟೋ ಜರ್ದಾರಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ.
ಇನ್ನು ಪಾಕಿಸ್ತಾನದ ಚುನಾವಣಾ ಆಯೋಗವು ಯಾರು ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಲಾಹೋರ್ ಕ್ಷೇತ್ರದಲ್ಲಿ ಯಾಸ್ಮಿನ್ ರಶೀದ್ ವಿರುದ್ಧ ನವಾಜ್ ಷರೀಫ್ 55,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಪಾಕಿಸ್ತಾನ ಚುನಾವಣೆಯ ಮತಗಳ ಎಣಿಕೆ ವಿಳಂಬವಾಗುತ್ತಿದ್ದು, ಮತ ಎಣಿಕೆಯಲ್ಲಿ ವಂಚನೆ ನಡೆಯುತ್ತಿದೆ ಎಂಬ ಅನುಮಾನ ಮೂಡಿದೆ. ಇದುವರೆಗೂ 53 ಸ್ಥಾನಗಳ ಫಲಿತಾಂಶ ಘೋಷಿಸಲಾಗಿದ್ದು, ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷ 17 ಸ್ಥಾನಗಳನ್ನು ಗೆದ್ದುಕೊಂಡಿದೆ.
ಗುರುವಾರ ಸಂಜೆ ಪಾಕಿಸ್ತಾನದಲ್ಲಿ ಚುನಾವಣೆ ಮುಗಿದಿದೆ. ಸ್ವಲ್ಪ ಹೊತ್ತಿನ ನಂತರ ಮತ ಎಣಿಕೆ ಕಾರ್ಯ ಆರಂಭವಾಯಿತು. ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಮೊದಲ ಫಲಿತಾಂಶ ಪ್ರಕಟವಾಯಿತು. ಅದರ ನಂತರ ಫಲಿತಾಂಶಗಳನ್ನು ನಿಲ್ಲಿಸಲಾಯಿತು. ಅವರು ಶುಕ್ರವಾರ ಬೆಳಗ್ಗೆ ಮತ್ತೆ ಫಲಿತಾಂಶ ಘೋಷಿಸಿದರು.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 336 ಸ್ಥಾನಗಳಿವೆ. ಈ ಪೈಕಿ 266 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ಉಳಿದ 70 ಸ್ಥಾನಗಳಲ್ಲಿ 10 ಅಲ್ಪಸಂಖ್ಯಾತರಿಗೆ ಮತ್ತು 60 ಮಹಿಳೆಯರಿಗೆ ಮೀಸಲಾಗಿದೆ. ಇವುಗಳನ್ನು ಆಯಾ ಪಕ್ಷಗಳು ಅವರು ಗಳಿಸಿದ ಸ್ಥಾನಗಳಿಗೆ ಅನುಗುಣವಾಗಿ ಅನುಪಾತದಲ್ಲಿ ಹಂಚಲಾಗುತ್ತದೆ. ಒಂದು ಸ್ಥಾನದಲ್ಲಿ ಅಭ್ಯರ್ಥಿ ಸಾವನ್ನಪ್ಪಿದ್ದರಿಂದ ಈ ಬಾರಿ 265 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿದೆ. ಸರ್ಕಾರ ರಚಿಸಲು ಕನಿಷ್ಠ 135 ಸ್ಥಾನಗಳನ್ನು ಗೆಲ್ಲಬೇಕು.