Saturday, December 20, 2025

ಭಾರತೀಯ ವಿಮಾನಗಳಿಗೆ ಮತ್ತೆ ವಾಯುಪ್ರದೇಶ ನಿಷೇಧ ವಿಸ್ತರಿಸಿದ ಪಾಕಿಸ್ತಾನ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿದ ಬಳಿಕ ಪಾಕಿಸ್ತಾನವು ತನ್ನ ವಾಯುಪ್ರದೇಶದೊಳಗೆ ಭಾರತೀಯ ವಿಮಾನ ಪ್ರವೇಶವನ್ನು ನಿಷೇಧಿಸಿತ್ತು. ಈ ನಿಷೇಧವನ್ನು ಇದೀಗ ಜನವರಿ 23ರವರೆಗೆ ವಿಸ್ತರಿಸಲಾಗಿದೆ. ಭಾರತವೂ ಕೂಡ ಪಾಕಿಸ್ತಾನ ವಿಮಾನಗಳಿಗೆ ತನ್ನ ವಾಯುಪ್ರದೇಶ ನಿಷೇಧ ಅವಧಿಯನ್ನು ವಿಸ್ತರಿಸಿದೆ.

ಕಳೆದ ಏಪ್ರಿಲ್ ತಿಂಗಳಾಂತ್ಯದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆಯು ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿದ್ದರಿಂದ ಪಾಕಿಸ್ತಾನವು ಎಲ್ಲಾ ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ಇದರ ಬೆನ್ನಲ್ಲೇ ಭಾರತವೂ ಕೂಡ ಪಾಕಿಸ್ತಾನದ ಮೇಲೆ ಈ ನಿರ್ಬಂಧ ವಿಧಿಸಿತ್ತು. ಬುಧವಾರ ಪಾಕಿಸ್ತಾನ ನಿಷೇಧವನ್ನು ವಿಸ್ತರಿಸಿದ್ದರಿಂದ ಭಾರತವು ಕೂಡ ನಿಷೇಧ ಅವಧಿಯನ್ನು ವಿಸ್ತರಿಸಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಸುಮಾರು ಒಂಬತ್ತು ತಿಂಗಳಿನಿಂದ ವಿಮಾನ ಕಾರ್ಯಾಚರಣೆಗಳನ್ನು ನಿರ್ಬಂಧಿಸಲಾಗಿದೆ. ನಿಷೇಧದ ಹಿಂದಿನ ವಿಸ್ತರಣೆ ಅವಧಿಯು ಡಿಸೆಂಬರ್ 24ರಂದು ಕೊನೆಯಾಗಬೇಕಿತ್ತು. ಆದರೆ ಇದಕ್ಕೂ ಮುನ್ನವೇ ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರ ಈ ನಿರ್ಬಂಧವನ್ನು ಜನವರಿ 23 ರವರೆಗೆ ಮುಂದುವರಿಸಿರುವುದಾಗಿ ತಿಳಿಸಿದೆ.

ಭಾರತೀಯ ವಿಮಾನಯಾನ ನಿರ್ವಾಹಕರು, ಮಿಲಿಟರಿ ವಿಮಾನಗಳ ಒಡೆತನದ, ನಿರ್ವಹಿಸುವ ಅಥವಾ ಗುತ್ತಿಗೆ ಪಡೆದಿರುವ ಭಾರತೀಯ ನೋಂದಾಯಿತ ವಿಮಾನಗಳಿಗೆ ಈ ನಿಷೇಧ ಅನ್ವಯವಾಗುತ್ತದೆ ಎಂದು ಪಾಕಿಸ್ತಾನ ದೃಢಪಡಿಸಿದೆ.

ಪಾಕಿಸ್ತಾನ ವಾಯುಪ್ರದೇಶ ಮುಚ್ಚಿರುವುದರಿಂದ ಭಾರತೀಯ ವಿಮಾನಯಾನ ನಿರ್ವಾಹಕರು ಅರೇಬಿಯನ್ ಸಮುದ್ರ ಮತ್ತು ಮಧ್ಯ ಏಷ್ಯಾದ ಮೇಲೆ ದೀರ್ಘ ಪ್ರಯಾಣ ಮಾರ್ಗಗಳನ್ನು ಬಳಸುತ್ತಿರುವುದನ್ನು ಮುಂದುವರಿಸಬೇಕಾಗುತ್ತದೆ.

ಈ ನಿರ್ಬಂಧ ಭಾರತೀಯ ವಿಮಾನಯಾನ ನಿರ್ವಾಹಕರು ನಿರ್ವಹಿಸುವ ಸುಮಾರು 800 ವಿಮಾನಗಳ ಪ್ರಯಾಣದ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಮುಖ್ಯವಾಗಿ ದೆಹಲಿ, ಅಮೃತಸರ ಮತ್ತು ಜೈಪುರದಂತಹ ಉತ್ತರ ಭಾರತದ ಪ್ರಮುಖ ವಿಮಾನ ನಿಲ್ದಾಣಗಳಿಂದ ಪಶ್ಚಿಮ ಏಷ್ಯಾ, ಯುರೋಪ್, ಯುನೈಟೆಡ್ ಕಿಂಗ್‌ಡಮ್, ಕಾಕಸಸ್ ಮತ್ತು ಪೂರ್ವ ಉತ್ತರ ಅಮೆರಿಕ ಸೇರಿದಂತೆ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳು ಸೇರಿವೆ.

error: Content is protected !!