ಪಾಕಿಸ್ತಾನ ಮತ್ತೆ ಗಡಗಡ: ನಿದ್ದೆಗಣ್ಣಲ್ಲೇ ಮನೆಯಿಂದ ಹೊರಗೆ ಓಡಿದ ಜನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಮತ್ತೆ ಭೂಕಂಪದ ತೀವ್ರ ಕಂಪನಕ್ಕೆ ತತ್ತರಿಸಿ ಹೋಗಿದೆ. ಭಾನುವಾರ (ಆ.3) ಮಧ್ಯರಾತ್ರಿ 12:40ಕ್ಕೆ ಸಂಭವಿಸಿದ ಭೂಕಂಪದಿಂದ ಖೈಬರ್ ಪಖ್ತುನ್ಖ್ವಾ, ಪಂಜಾಬ್ ಹಾಗೂ ಇಸ್ಲಾಮಾಬಾದ್ ಭಾಗಗಳಲ್ಲಿ ಜನ ಭಯಭೀತರಾಗಿದ್ದು, ನಿದ್ರೆಯಿಂದ ಎಚ್ಚರಗೊಂಡು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ಪ್ರಕಾರ, ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.8 ರಷ್ಟಿತ್ತು. ಭೂಮಿಯಿಂದ ಕೇವಲ 10 ಕಿಲೋಮೀಟರ್ ಆಳದಲ್ಲಿ ಕೇಂದ್ರಬಿಂದು ಹೊಂದಿದ್ದು, ಈ ಆಳವಿಲ್ಲದ ಭೂಕಂಪದ ತೀವ್ರತೆ ಜನರಲ್ಲಿ ಭಯವನ್ನು ಹುಟ್ಟುಹಾಕಿದೆ.

ಈ ಹಿಂದೆ, ಶನಿವಾರ (ಆ.2) ಕೂಡ ಪಾಕಿಸ್ತಾನದಲ್ಲಿ 5.4 ತೀವ್ರತೆಯ ಭೂಕಂಪವಾಗಿತ್ತು. ಒಂದು ದಿನದೊಳಗೆ ಎರಡು ಭಾರಿ ಸಂಭವಿಸಿರುವ ಈ ಭೂಕಂಪಗಳು ದೇಶದ ಭೂಕಂಪನಶೀಲ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿನಷ್ಟದ ವರದಿಯಾಗಿಲ್ಲದಿದ್ದರೂ, ಅಧಿಕಾರಿಗಳು ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ.

ಪಾಕಿಸ್ತಾನವು ಯುರೇಷಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ತಟ್ಟೆಗಳ ನಡುವೆ ಇರುವ ಕಾರಣದಿಂದಾಗಿ, ಈ ಭಾಗದಲ್ಲಿ ಭೂಕಂಪಗಳು ಸಾಮಾನ್ಯವಾಗಿವೆ. ವಿಶೇಷವಾಗಿ ಬಲೂಚಿಸ್ತಾನ್, ಖೈಬರ್ ಪಖ್ತುನ್ಖ್ವಾ, ಗಿಲ್ಗಿಟ್-ಬಾಲ್ಟಿಸ್ತಾನ್, ಸಿಂಧ್ ಮತ್ತು ಪಂಜಾಬ್ ಪ್ರದೇಶಗಳು ಹೆಚ್ಚಿನ ಭೂಕಂಪಗೊಳಗಾಗುತ್ತವೆ. ತಜ್ಞರ ಪ್ರಕಾರ, ಕಡಿಮೆ ಆಳದ ಭೂಕಂಪಗಳು ಹೆಚ್ಚು ಹಾನಿಕಾರಕವಾಗುವ ಸಾಧ್ಯತೆ ಇರುವುದರಿಂದ, ಕಟ್ಟಡಗಳು ಮತ್ತು ಸಾರ್ವಜನಿಕ ಸೌಕರ್ಯಗಳಿಗೆ ಹೆಚ್ಚಿನ ಹಾನಿ ಸಂಭವಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!