ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಮಾರ್ಚ್‌ನಲ್ಲಿ ಪಾಕ್ ಹಣದುಬ್ಬರ ಶೇ.35.37ಕ್ಕೆ ತಲುಪಿದೆ. 50 ವರ್ಷದಲ್ಲೇ ಗರಿಷ್ಠ ಮಟ್ಟದ ಹಣದುಬ್ಬರ ದರ ಇದಾಗಿದೆ.
ಹಸಿವಿನಿಂದ ಜನರು ಬಳಲುತ್ತಿದ್ದು, ನಿತ್ಯವೂ ಒಂದೊಂದು ಭಾಗದಲ್ಲಿ ಆಹಾರಕ್ಕಾಗಿ ಕಾಲ್ತುಳಿತ ಉಂಟಾಗುತ್ತಿದೆ. ಕಳೆದ 10 ದಿನದಲ್ಲಿ ಆಹಾರಕ್ಕಾಗಿ ನೂಕುನುಗ್ಗಲು ಉಂಟಾದ ವೇಳೆ ಮೃತಪಟ್ಟಿದ್ದು 21 ಮಂದಿ!
ಪಾಕ್‌ನ ವಿದೇಶಿ ವಿನಿಮಯ ಖಾಲಿಯಾಗಿದೆ. ಇಲ್ಲಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಬೇಕಿದೆ. ಅದಕ್ಕೆ ಬೇಕಾದ ಪ್ರಕ್ರಿಯೆ ಪೂರೈಸುವುದು ಕಠಿಣ ಸವಾಲಾಗಿದೆ. ಈ ನಡುವೆ ಹಣದುಬ್ಬರ ಹೆಚ್ಚಾಗಿದೆ. ಇನ್ನು ಮುಂದೆಯೂ ಹೆಚ್ಚಾಗುತ್ತದೆ. ದಿನವೂ ಪಾಕಿಸ್ತಾನದ ಬೇರೆ ಬೇರೆ ಭಾಗಗಳಲ್ಲಿ ಕಾಲ್ತುಳಿತ ಉಂಟಾಗುತ್ತಿದೆ.
ಕರಾಚಿಯ ಸೈಟ್ ಪ್ರದೇಶದ ನೌರಾಸ್ ಕ್ರಾಸ್‌ರೋಡ್ಸ್ ಬಳಿ ಕಾರ್ಖಾನೆಯಲ್ಲಿ ಉಚಿತ ಪಡಿತರ ವಿತರಿಸುವಾಗ ಸಾವಿರಾರು ಮಂದಿ ನೆರೆದಿದ್ದು, ನೂಕು ನುಗ್ಗಲು ಉಂಟಾಗಿದೆ, ಇದರಲ್ಲಿ 12 ಮಂದಿ ಕಾಲ್ತುಳಿತಕ್ಕೆ ಸಿಕ್ಕು ಮೃತಪಟ್ಟಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಪಾಕಿಸ್ತಾನದಲ್ಲಿ ಜನರು ಜೀವನ ಮಾಡುವುದೇ ಕಷ್ಟವಾಗುತ್ತದೆ. ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.