ಹೊಸದಿಗಂತ ಡಿಜಿಟಲ್ ಡೆಸ್ಕ್ :
ಅಮೆರಿಕನ್ ಪೋಡ್ಕ್ಯಾಸ್ಟರ್ ಹಾಗೂ ಸಂಶೋಧಕ ವಿಜ್ಞಾನಿ ಲೆಕ್ಸ್ ಫ್ರೀಡ್ಮ್ಯಾನ್ ಜೊತೆಗಿನ ಪೋಡ್ಕ್ಯಾಸ್ಟ್ನಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನವನ್ನು ವಿಶ್ವದ ಭಯೋತ್ಪಾದನಾ ಕೇಂದ್ರ ಬಿಂದು ಎಂದು ಬಣ್ಣಿಸಿದ್ದಾರೆ.
ಲೆಕ್ಸ್ ಫ್ರಿಡ್‌ಮನ್ ಅವರೊಂದಿಗಿನ ಸಂದರ್ಶನದಲ್ಲಿ ಭಾರತ-ಪಾಕಿಸ್ತಾನ ಸಂಬಂಧಗಳ ಉದ್ವಿಗ್ನತೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ವಿಶ್ವದ ತೀವ್ರ ಬಿಕ್ಕಟ್ಟುಗಳಲ್ಲಿ ಒಂದೆನಿಸಿದೆ. ಬಲವಾದ ತಾತ್ವಿಕ ಭಿನ್ನತೆಗಳಿರುವ ಎರಡು ಪರಮಾಣು ಶಕ್ತಿಗಳು ನಡುವಿನ ಸಂಘರ್ಷ ಇದಾಗಿದೆ. ಶಾಂತಿಗೆ ಒತ್ತು ಕೊಡುವ ತಾವು ಈ ಎರಡು ದೇಶಗಳ ನಡುವೆ ಉತ್ತಮ ಬಾಂಧವ್ಯ ಮೂಡಿಸಲು ಹೇಗೆ ಯೋಜಿಸುತ್ತೀರಿ ಎಂದು ಲೆಕ್ಸ್ ಫ್ರೀಡ್ಮ್ಯಾನ್ ತಮ್ಮ ಪೋಡ್ ಕ್ಯಾಸ್ಟ್ನಲ್ಲಿ ಮೋದಿ ಅವರನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನರೇಂದ್ರ ಮೋದಿ, ಪಾಕಿಸ್ತಾನ ಹೇಗೆ ವಿಶ್ವಾಸ ದ್ರೋಹ ಎಸಗುತ್ತದೆ, ಹೇಗೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತದೆ ಎಂಬುದನ್ನು ವಿವರಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ತಾತ್ವಿಕ ಭಿನ್ನಾಭಿಪ್ರಾಯ ಇದೆ ಎಂದು ಲೆಕ್ಸ್ ಫ್ರೀಡ್ಮ್ಯಾನ್ ಅನಿಸಿಕೆಯನ್ನು ಮೋದಿ ತಳ್ಳಿಹಾಕಿದ್ದು, ‘ಇದನ್ನು ವಿಚಾರಧಾರೆಗೆ ಹೋಲಿಸಬೇಡಿ. ರಕ್ತಪಾತದ ಮೇಲೆ ನಿಂತಿರುವ ಮತ್ತು ಭಯೋತ್ಪಾದನೆಯನ್ನು ಹರಡುತ್ತಿರುವುದು ಯಾವ ವಿಚಾರಧಾರೆ ಹೇಳಿ. ಈ ಕುಕೃತ್ಯಗಳಿಗೆ ನಾವು ಮಾತ್ರವೇ ಬಲಿಪಶುವಾಗಿಲ್ಲ. ವಿಶ್ವದಲ್ಲಿ ಎಲ್ಲೇ ಭಯೋತ್ಪಾದಕ ದಾಳಿ ನಡೆದಿರಲಿ, ಅದರ ಜಾಡು ಹಿಡಿದು ಹೊರಟರೆ ಪಾಕಿಸ್ತಾನದ ಪಾತ್ರ ಕಾಣುತ್ತದೆ. ಉದಾಹರಣೆಗೆ, ಸೆಪ್ಟೆಂಬರ್ 11ರ ದಾಳಿ ನೆನಪಿಸಿಕೊಳ್ಳಿ. ಅದರ ಮಾಸ್ಟರ್ ಮೈಂಡ್ ಆಗಿದ್ದುದು ಒಸಾಮ ಬಿನ್ ಲಾಡನ್. ಈತ ಎಲ್ಲಿಂದ ಬಂದ? ಆತ ಪಾಕಿಸ್ತಾನದಲ್ಲಿ ಆಶ್ರಯ ಪಡೆದವನು. ಭಯೋತ್ಪಾದನೆ ಮತ್ತು ಭಯೋತ್ಪಾದಕ ಮನೋಭಾವವು ಪಾಕಿಸ್ತಾನದಲ್ಲಿ ಆಳವಾಗಿ ಬೇರೂರಿಬಿಟ್ಟಿರುವುದನ್ನು ಇಡೀ ಜಗತ್ತು ಒಪ್ಪಿಕೊಳ್ಳುತ್ತದೆ’ ಎಂದು ಮೋದಿ ಹೇಳಿದರು.
ಪಾಕಿಸ್ತಾನ ಇಂದು ಕೇವಲ ಭಾರತಕ್ಕೆ ಮಾತ್ರವಲ್ಲ, ವಿಶ್ವದ ತಲೆನೋವಿನ ಮೂಲವೂ ಆಗಿ ನಿಂತಿದೆ. ಈ ಹಾದಿಯಲ್ಲಿ ಯಾವ ಒಳಿತನ್ನು ಸಾಧಿಸಿದಂತಾಗುತ್ತದೆ ಎಂದು ನಾವು ಪದೇ ಪದೇ ಕೇಳುತ್ತಿದ್ದೇವೆ. ಪ್ರಾಯೋಜಿತ ಭಯೋತ್ಪಾದನೆಯ ಹಾದಿಯನ್ನು ತೊರೆಯುವಂತೆ ಒತ್ತಾಯಿಸುತ್ತಿದ್ದೇವೆ. ನಿಮ್ಮ ರಾಷ್ಟ್ರವನ್ನು ಕಾನೂನುಬಾಹಿರ ಶಕ್ತಿಗಳಿಗೆ ಒಪ್ಪಿಸುವ ಮೂಲಕ ನೀವು ಏನು ಗಳಿಸಲು ಆಶಿಸುತ್ತೀರಿ? ಅಂತ ಪಾಕ್‌ಗೆ ಪ್ರಶ್ನಿಸಿದ್ರು. ಶಾಂತಿಯನ್ನು ಅನುಸರಿಸಲು ನಾನು ವೈಯಕ್ತಿಕವಾಗಿ ಲಾಹೋರ್‌ಗೆ ಪ್ರಯಾಣಿಸಿದೆ ಎಂದು ಅವರು ಹೇಳಿದರು.
ಅತ್ಯಂತ ಪ್ರತಿಕೂಲ ನೆರೆಯ ರಾಷ್ಟ್ರವಾದ ಪಾಕಿಸ್ತಾನದೊಂದಿಗೆ ಸಂಬಂಧವನ್ನು ಸುಧಾರಿಸುವ ತನ್ನ ಪ್ರಯತ್ನಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, ತಾವು ಪ್ರಧಾನಿಯಾದಾಗ, ಎರಡೂ ರಾಷ್ಟ್ರಗಳು ಹೊಸ ಯುಗಕ್ಕೆ ಮರಳಲು ಪಾಕಿಸ್ತಾನವನ್ನು ತಮ್ಮ ಪ್ರಮಾಣವಚನ ಸಮಾರಂಭಕ್ಕೆ ವಿಶೇಷವಾಗಿ ಆಹ್ವಾನಿಸಿದ್ದಾಗಿ ಹೇಳಿದರು.
ಪಾಕಿಸ್ತಾನದ ನಾಯಕರಿಗೆ ಸದ್ಬುದ್ಧಿ ಸಿಕ್ಕು ಶಾಂತಿಯ ಹಾದಿಯನ್ನು ಅವರು ತುಳಿಯುವಂತಾಗಲಿ ಎಂದು ಬಯಸುತ್ತೇನೆ. ಪಾಕಿಸ್ತಾನದ ಜನರಿಗೆ ಈ ಪ್ರಕ್ಷುಬ್ದ ವಾತಾವರಣ ರೋಸಿ ಹೋಗುವಂತೆ ಮಾಡಿದೆ. ಅವರೂ ಕೂಡ ಶಾಂತಿ ಬಯಸುತ್ತಿದ್ದಾರೆ ಎಂದು ನರೇಂದ್ರ ಮೋದಿ ವಿವರಿಸಿದ್ದಾರೆ.