ಭಾರತ ಏಷ್ಯಾಕಪ್​ಗೆ ಹೋಗದಿದ್ದರೆ, ಏಕದಿನ ವಿಶ್ವಕಪ್​ಗೆ ಬರಲ್ವಂತೆ ಪಾಕ್‌! ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಾಕಿಸ್ತಾನದಲ್ಲಿ ಆಯೋಜಿಸಲಾದ ಮುಂದಿನ ಆವೃತ್ತಿಯ ಏಷ್ಯಾಕಪ್​ನಲ್ಲಿ ಭಾಗಿಯಾಗದಿರಲು ಬಿಸಿಸಿಐ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಪಾಕ್ ಮಂಡಳಿ ಬಿಸಿಸಿಐಗೆ ತಿರುಗೇಟು ನೀಡಲು ಸಿದ್ಧವಾಗಿದ್ದು, ಒಂದೊಮ್ಮೆ ತನ್ನ ನೆಲದಲ್ಲಿ ನಡೆಯಲ್ಲಿರುವ ಏಷ್ಯಾಕಪ್​ಗೆ ಟೀಂ ಇಂಡಿಯಾ ಬರದಿದ್ದರೆ, ತಾನು ಸಹ ಮುಂದಿನ ವರ್ಷ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್​ನಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಿಂದ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದ್ದು, ತಟಸ್ಥ ಸ್ಥಳದಲ್ಲಿ ಏಷ್ಯಾಕಪ್ ಆಡಲು ಆದ್ಯತೆ ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೀಡಿದ್ದ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದೆ.
ಮಂಗಳವಾರ ಮುಂಬೈನಲ್ಲಿ ನಡೆದ ಬಿಸಿಸಿಐ ಎಜಿಎಂ ನಂತರ, ಸುದ್ದಿಗಾರರ ಅನೌಪಚಾರಿಕ ಸಭೆಯಲ್ಲಿ ಶಾ ಅವರು “ಭಾರತವು ಏಷ್ಯಾ ಕಪ್ ಅನ್ನು ತಟಸ್ಥ ಸ್ಥಳದಲ್ಲಿ ಆಡಲು ಬಯಸುತ್ತದೆ” ಎಂದು ಹೇಳಿದರು.
ಶಾ ಅವರ ಹೇಳಿಕೆಯ ನಂತರ, ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ಐಸಿಸಿ ವಿಶ್ವಕಪ್‌ನಿಂದ ಹೊರಬರುವುದು ತಾನು ಯೋಚಿಸುತ್ತಿರುವ ಆಯ್ಕೆಗಳಲ್ಲಿ ಒಂದಾಗಿದೆ ಎಂದು ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಅವರ ನಿಕಟ ಮೂಲಗಳು ಸೂಚಿಸಿವೆ.
” ಈ ಎರಡು ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನವು ಆಡದಿದ್ದರೆ ಐಸಿಸಿ ಮತ್ತು ಎಸಿಸಿ ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ. ಆದರೆ ಪಿಸಿಬಿ ಈ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂದೆಗೆಯುವುದಿಲ್ಲ” ಎಂದು ಪಿಸಿಬಿ ಮೂಲ ಹೇಳಿದೆ.
ಭಾರತವು ಜಾಗತಿಕ ಟೂರ್ನಿಗಳಲ್ಲಿ ಪಾಕಿಸ್ತಾನವನ್ನು ಎದುರಿಸುತ್ತಿದೆ. ಆದರೆ, 2008 ರ ಏಷ್ಯಾ ಕಪ್ ನಂತರ ಪಾಕಿಸ್ತಾನಕ್ಕೆ ಪ್ರಯಾಣಿಸಿಲ್ಲ. ಪಾಕಿಸ್ತಾನ ಕೊನೆಯದಾಗಿ 2012 ರಲ್ಲಿ ಆರು ಪಂದ್ಯಗಳ ಏಕದಿನ ದ್ವಿಪಕ್ಷೀಯ ಸರಣಿಗಾಗಿ ಭಾರತಕ್ಕೆ ಬಂದಿತ್ತು.
ವಿಶ್ವಕಪ್‌ ಬಹಿಷ್ಕರಿಸುವ ಕುರಿತು ಪಿಸಿಬಿಯನ್ನು ಸಂಪರ್ಕಿಸಿದಾಗ ಶಾ ಹೇಳಿಕೆಗೆ ಅಧಿಕೃತ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
“ಈ ಸಮಯದಲ್ಲಿ ನಾವು ಏನನ್ನೂ ಹೇಳುವುದಿಲ್ಲ. ನಾವು ಕೆಲವು ಆಯ್ಕೆಗಳನ್ನು ಪರಿಗಣಿಸುತ್ತೇವೆ.  ಮುಂದಿನ ತಿಂಗಳು ಮೆಲ್ಬೋರ್ನ್‌ನಲ್ಲಿ ನಡೆಯುವ ಐಸಿಸಿ ಮಂಡಳಿಯ ಸಭೆಯಂತಹ ಸೂಕ್ತ ವೇದಿಕೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ” ಎಂದು ಪಿಸಿಬಿ ವಕ್ತಾರರು ತಿಳಿಸಿದ್ದಾರೆ. ಆದಾಗ್ಯೂ, ಮುಂದಿನ ವರ್ಷ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂಬ ಜಯ್ ಶಾ ಅವರ ಘೋಷಣೆಯಿಂದ ಪಿಸಿಬಿ ಅಧ್ಯಕ್ಷ ರಾಜಾ ಮತ್ತು ಇತರ ಹಿರಿಯ ಅಧಿಕಾರಿಗಳು ತೀವ್ರ ಅಸಮಾಧಾನಗೊಂಡಿದ್ದಾರೆ. ಮತ್ತು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!