ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಸೋಮವಾರ ಅಭಿನಂದಿಸಿದ್ದಾರೆ.
ಮೋದಿಯವರಿಗೆ ಚುನಾವಣಾ ಗೆಲುವಿನ ಸಂದೇಶವನ್ನು ಕಳುಹಿಸುವುದನ್ನು ಪಾಕಿಸ್ತಾನವು ಇಲ್ಲಿಯವರೆಗೆ ತಡೆಹಿಡಿದಿತ್ತು. ಇದೀಗ ‘ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು’ ಎಂದು ಷರೀಫ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಜಿ ಪ್ರಧಾನಿ ನವಾಜ್ ಷರೀಫ್ ಕೂಡ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
‘ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಮೋದಿ ಜಿ ಅವರಿಗೆ ನನ್ನ ಹಾರ್ದಿಕ ಶುಭಾಶಯಗಳು. ಇತ್ತೀಚಿನ ಚುನಾವಣೆಗಳಲ್ಲಿ ನಿಮ್ಮ ಪಕ್ಷದ ಯಶಸ್ಸು ನಿಮ್ಮ ನಾಯಕತ್ವದಲ್ಲಿ ಜನರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದ್ದಾರೆ. 2014 ರಲ್ಲಿ ಮೋದಿಯವರ ಮೊದಲ ಪ್ರಮಾಣ ವಚನ ಸಮಾರಂಭದಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಭಾಗವಹಿಸಿದ್ದರು. ‘ನಾವು ದ್ವೇಷವನ್ನು ಭರವಸೆಯಿಂದ ಬದಲಾಯಿಸೋಣ ಮತ್ತು ದಕ್ಷಿಣ ಏಷ್ಯಾದ ಎರಡು ಶತಕೋಟಿ ಜನರ ಭವಿಷ್ಯವನ್ನು ರೂಪಿಸುವ ಅವಕಾಶವನ್ನು ಬಳಸಿಕೊಳ್ಳೋಣ’ ಎಂದು ಅವರು ಹೇಳಿದ್ದಾರೆ.
ಮೋದಿ ಟ್ವೀಟ್
ಶೆಹಬಾಜ್ ಷರೀಫ್ ಅವರ ಸಂದೇಶಕ್ಕೆ ಮೋದಿ ಅವರು ಪ್ರತಿಕ್ರಿಯಿಸಿದ್ದು ‘ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.