ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಇಂದು ಭಾರತದ ಜೊತೆ ಭಯೋತ್ಪಾದನೆಯನ್ನು ಎದುರಿಸಲು ಮತ್ತು ಐತಿಹಾಸಿಕ ಪಾಲುದಾರಿಕೆಯನ್ನು ರೂಪಿಸಲು ಸಿದ್ಧವಿದೆ ಎಂದು ಹೇಳಿದ್ದಾರೆ.
ವರಸೆ ಬದಲಿಸಿರುವ ಭುಟ್ಟೋ, ಭಯೋತ್ಪಾದನೆಯನ್ನು ಎದುರಿಸಲು ಮತ್ತು ಪ್ರಾದೇಶಿಕ ಶಾಂತಿಯನ್ನು ಬೆಳೆಸಲು ಐತಿಹಾಸಿಕ, ಅದ್ಭುತ ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ ಪಾಕಿಸ್ತಾನದ ಜೊತೆ ಕೈಜೋಡಿಸಲು ಭಾರತಕ್ಕೆ ಮನವಿ ಮಾಡಿದ್ದಾರೆ.
ಇಸ್ಲಾಮಾಬಾದ್ ನೀತಿ ಸಂಶೋಧನಾ ಸಂಸ್ಥೆಯಲ್ಲಿ ಭಯೋತ್ಪಾದನೆಯ ವಿರುದ್ಧ ಪಾಕಿಸ್ತಾನದ ಯುದ್ಧ ಎಂಬ ವಿಷಯದ ಕುರಿತು ಮಾತನಾಡಿದ ಭುಟ್ಟೋ, ಭಾರತವು ದ್ವೇಷವನ್ನು ಮೀರಿ ಪಾಕಿಸ್ತಾನದ ಜೊತೆ ಕೈ ಜೋಡಿಸಲು ಒತ್ತಾಯಿಸಿದರು.
ಪಾಕಿಸ್ತಾನಕ್ಕೆ ಸಂಬಂಧಿಸಿದ ಭಯೋತ್ಪಾದಕರಿಂದ 26 ನಾಗರಿಕರು ಸಾವನ್ನಪ್ಪಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಸ್ಥಗಿತಗೊಳಿಸಿದ ಕಾಶ್ಮೀರ ಮತ್ತು ಸಿಂಧೂ ಜಲ ಒಪ್ಪಂದ (ಐಡಬ್ಲ್ಯೂಟಿ) ಸೇರಿದಂತೆ ದೀರ್ಘಕಾಲದ ವಿವಾದಗಳನ್ನು ಬಗೆಹರಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ‘ಜನರ ಆಕಾಂಕ್ಷೆಗಳಿಗೆ’ ಅನುಗುಣವಾಗಿ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಬಿಲಾವಲ್ ಭುಟ್ಟೋ ಒತ್ತಾಯಿಸಿದರು.