ಉಗ್ರ ಹಫೀಜ್ ಸಯೀದ್, ಮಸೂದ್ ಅಜರ್​ನನ್ನು ಭಾರತಕ್ಕೆ ಹಸ್ತಾಂತರಿಸಲು ಪಾಕ್ ಸಿದ್ಧ: ಬಿಲಾವಲ್ ಭುಟ್ಟೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

26/11 ಮುಂಬೈ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಹಾಗೂ ಜೈಷ್-ಎ-ಮೊಹಮ್ಮದ್ ನಾಯಕ ಮಸೂದ್ ಅಜರ್ ನಂತಹ ಭಯೋತ್ಪಾದಕರನ್ನು ಭಾರತವು ಕೇಳಿದರೆ, ಅವರನ್ನು ಹಸ್ತಾಂತರಿಸಲು ಪಾಕಿಸ್ತಾನ ಸಿದ್ಧವಿದೆ ಎಂದು ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕ ಹಾಗೂ ಮಾಜಿ ಸಚಿವರಾಗಿರುವ ಬಿಲಾವಲ್, ಖಾಸಗಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ಹಫೀಜ್ ಸಯೀದ್ ಪಾಕ್ ನಲ್ಲಿ ಬಂಧಿತನಾಗಿದ್ದಾನೆ. ಮಸೂದ್ ಅಜರ್ ಅಫ್ಘಾನಿಸ್ತಾನದಲ್ಲಿ ಇರಬಹುದು ಎಂಬ ಮಾಹಿತಿ ಇದೆ. ಭಾರತ ಈ ಸಂಬಂಧ ಅಗತ್ಯ ಸಾಕ್ಷ್ಯಗಳನ್ನು ಒದಗಿಸಿದರೆ, ಅವರನ್ನು ಶಿಕ್ಷೆಗೊಳಪಡಿಸಲು ಅಥವಾ ಹಸ್ತಾಂತರ ಮಾಡಲು ಯಾವುದೇ ತೊಂದರೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಇಬ್ಬರ ವಿರುದ್ಧವೂ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಗಳಿವೆ. ಆದರೆ ಗಡಿಯಾಚೆಗಿನ ಉಗ್ರತೆ ಪ್ರಕರಣಗಳಲ್ಲಿ, ಅಲ್ಲಿನ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಭಾರತದಿಂದ ಪೂರಕ ಸಾಕ್ಷ್ಯಗಳು ಸಿಗಬೇಕು ಎಂದು ಅವರು ಹೇಳಿದ್ದಾರೆ.

ಭಾರತವು ಸಹಕರಿಸಿದರೆ ನಾವು ಈ ಉಗ್ರರನ್ನು ಗಡಿಪಾರು ಮಾಡುವಲ್ಲಿ ವಿಳಂಬವಿಲ್ಲ. ಈ ಬೇಡಿಕೆಗೆ ಪಾಕಿಸ್ತಾನದಲ್ಲಿ ಆಂತರಿಕ ವಿರೋಧವೂ ಇಲ್ಲ ಎಂದು ಬಿಲಾವಲ್ ಅಭಿಪ್ರಾಯಪಟ್ಟಿದ್ದಾರೆ.

ನ್ಯಾಕ್ಟಾ (ಪಾಕಿಸ್ತಾನದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಪ್ರಾಧಿಕಾರ) ಪ್ರಕಾರ, ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮತ್ತು ಜೈಷ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಗಳನ್ನು ನಿಷೇಧಿಸಲಾಗಿದೆ. ಹಫೀಜ್ ಸಯೀದ್ ಪ್ರಸ್ತುತ ಪಾಕ್ ಜೈಲಿನಲ್ಲಿ 33 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದಾರೆ. ಇನ್ನು ಮಸೂದ್ ಅಜರ್ ಜಾಗತಿಕ ಭಯೋತ್ಪಾದಕ ಎಂದು ಐಕ್ಯರಾಷ್ಟ್ರ ಸಂಸ್ಥೆ ಘೋಷಿಸಿದೆ.

ಅಜರ್ ಪಾಕಿಸ್ತಾನದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ ಬಿಲಾವಲ್, “ಅವನು ಅಫ್ಘಾನಿಸ್ತಾನದಲ್ಲಿ ಇರಬಹುದು ಎಂಬ ಶಂಕೆ ಇದೆ. ಪಾಕಿಸ್ತಾನದಲ್ಲಿ ಅವನ ಬಗ್ಗೆ ಖಚಿತ ಮಾಹಿತಿ ಇಲ್ಲ. ನಮಗೆ ಭಾರತ ಸಹಕರಿಸಿದರೆ, ಮುಂದಿನ ಕ್ರಮ ಕೈಗೊಳ್ಳಲು ಅವಕಾಶವಿದೆ” ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!