ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ 15 ಸದಸ್ಯರ ಬಲಿಷ್ಠ ತಂಡವನ್ನು ಘೋಷಿಸಿದೆ. ತಂಡದಲ್ಲಿ ಹಲವು ಅಚ್ಚರಿಯ ಬದಲಾವಣೆಗಳಾಗಿದ್ದು, ಸ್ಟಾರ್ ಆಲ್-ರೌಂಡರ್ ಸಲ್ಮಾನ್ ಅಲಿ ಅಘಾ ತಂಡವನ್ನು ಮುನ್ನಡೆಸಲಿದ್ದಾರೆ.
ಮಾಜಿ ನಾಯಕ ಬಾಬರ್ ಆಝಂ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ. ವೇಗದ ಬೌಲಿಂಗ್ ವಿಭಾಗವನ್ನು ಎಂದಿನಂತೆ ಶಾಹೀನ್ ಶಾ ಅಫ್ರಿದಿ ಮುನ್ನಡೆಸಲಿದ್ದು, ಅವರಿಗೆ ನಸೀಮ್ ಶಾ ಸಾಥ್ ನೀಡಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಅಬ್ರಾರ್ ಅಹ್ಮದ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಾರಿ ಆಯ್ಕೆ ಸಮಿತಿಯು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ ಹಾಗೂ ವೇಗಿ ಹ್ಯಾರಿಸ್ ರೌಫ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಇದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಯುವ ಆಟಗಾರರಾದ ಸೈಮ್ ಅಯ್ಯೂಬ್ ಮತ್ತು ಸಾಹಿಬ್‌ಝಾದ ಫರ್ಹಾನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ಅನುಭವಿ ಫಖರ್ ಝಮಾನ್ ಮೂರನೇ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಲಿದ್ದಾರೆ. ಆಲ್-ರೌಂಡರ್ ಕೋಟಾದಲ್ಲಿ ಮೊಹಮ್ಮದ್ ನವಾಝ್, ಶಾದಾಬ್ ಖಾನ್ ಮತ್ತು ಫಹೀಮ್ ಅಶ್ರಫ್ ಕಾಣಿಸಿಕೊಂಡಿದ್ದಾರೆ.
ಪಾಕಿಸ್ತಾನ ಟಿ20 ವಿಶ್ವಕಪ್ ತಂಡ ಹೀಗಿದೆ:
ಸಲ್ಮಾನ್ ಅಲಿ ಅಘಾ (ನಾಯಕ), ಬಾಬರ್ ಆಝಂ, ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ, ಅಬ್ರಾರ್ ಅಹ್ಮದ್, ಫಖರ್ ಝಮಾನ್, ಸೈಮ್ ಅಯ್ಯೂಬ್, ಸಾಹಿಬ್‌ಝಾದ ಫರ್ಹಾನ್ (ವಿಕೆಟ್ ಕೀಪರ್), ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಫಹೀಮ್ ಅಶ್ರಫ್, ಖ್ವಾಜಾ ಮೊಹಮ್ಮದ್ ನಫಾಯ್ (ವಿಕೆಟ್ ಕೀಪರ್), ಮೊಹಮ್ಮದ್ ಸಲ್ಮಾನ್ ಮಿರ್ಝ, ಉಸ್ಮಾನ್ ತಾರಿಖ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್).



