Friday, November 21, 2025

ಬೆಳ್ಳಂಬೆಳಗ್ಗೆ ನಡುಗಿದ ಪಾಕಿಸ್ತಾನ: ಬೆಚ್ಚಿಬಿದ್ದ ಜನತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಮುಂಜಾನೆ ಪಾಕಿಸ್ತಾನದ ಉತ್ತರ ಭಾಗದಲ್ಲಿ ಭಾರೀ ಭೂಕಂಪ ಸಂಭವಿಸಿದೆ.

ಬೆಳಗಿನ ಜಾವ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಜನರನ್ನು ನಿದ್ರೆಯಿಂದಲೇ ಎಬ್ಬಿಸಿ ಮನೆಯಿಂದ ಹೊರಗೆ ಓಡಿಬರುವ ಹಾಗೇ ಮಾಡಿದೆ. ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಿಸಿದ ಈ ಭೂಕಂಪ ಸ್ಥಳೀಯ ಸಮಯ ಬೆಳಿಗ್ಗೆ 2:39ಕ್ಕೆ(ಭಾರತೀಯ ಸಮಯ 3:09) ಆರಂಭವಾಯಿತು ಎಂದು ಹೇಳಲಾಗಿದೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಪಾಕಿಸ್ತಾನದ ರಾಷ್ಟ್ರೀಯ ಭೂಕಂಪನ ಕೇಂದ್ರ (NCS) ಪ್ರಕಾರ, ಭೂಕಂಪದ ಕೇಂದ್ರಬಿಂದು ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯ ಸಮೀಪದ ಹಿಂದೂಕುಶ್ ಪರ್ವತ ಶ್ರೇಣಿಯಲ್ಲಿದ್ದು, ಭೂಮಿಯೊಳಗೆ 135 ಕಿ.ಮೀ. ಆಳದಲ್ಲಿತ್ತು.

ಈ ಭೂಕಂಪ ಸಂಭವಿಸಿದಾಗ ಖೈಬರ್ ಪಖ್ತುನ್ಖ್ವಾ, ಗಿಲ್ಗಿಟ್- ಬಾಲ್ಟಿಸ್ತಾನ್,ಪಂಜಾಬ್‌ನ ಕೆಲವು ಭಾಗಗಳು ಮತ್ತು ಇಸ್ಲಾಮಾಬಾದ್‌ನಲ್ಲಿ ಬಲವಾದ ಕಂಪನ ಅನುಭವವಾಯಿತು. ಜನರು ಭಯಭೀತರಾಗಿ ಮನೆಗಳಿಂದ ಓಡಿ ಬೀದಿಗೆ ಬಂದರು. ಆದರೆ ಇನ್ನೂ ಯಾವುದೇ ಆಸ್ತಿ ಅಥವಾ ಪ್ರಾಣಹಾನಿಯ ವರದಿಯಾಗಿಲ್ಲ. ಭೂಕಂಪದ ಆಳ ಹೆಚ್ಚಿರುವುದರಿಂದ ಮೇಲ್ಮೈ ಹಾನಿ ಸೀಮಿತವಾಗಿರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ.

error: Content is protected !!