ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಆಪರೇಷನ್ ಸಿಂದೂರ್ ಬಗ್ಗೆ ಪಾಕಿಸ್ತಾನದ ಸೇನೆಗೆ ಮೊದಲೇ ಮಾಹಿತಿ ನೀಡಿದೆ ಎಂಬ ಕಾಂಗ್ರೆಸ್ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ಇಸ್ಲಾಮಾಬಾದ್‌ನ ಭೂಪ್ರದೇಶದಲ್ಲಿರುವ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ಭಾರತ ದಾಳಿ ನಡೆಸಿದ ನಂತರವೇ ಮಾಹಿತಿ ನೀಡಲಾಯಿತು ಎಂದು
ಹೇಳಿದ್ದಾರೆ.
ಸಂಸತ್ತಿನಲ್ಲಿ ನಡೆದ ಸಮಾಲೋಚನಾ ಸಮಿತಿ ಸಭೆಯಲ್ಲಿ ಮಾತನಾಡಿದ ಸಚಿವ ಜೈಶಂಕರ್, ಈ ಆರೋಪಗಳನ್ನು “ಅಪ್ರಾಮಾಣಿಕ” ಮತ್ತು “ತಪ್ಪು ನಿರೂಪಣೆ”ಗಳಿಂದ ಕೂಡಿದ ಹೇಳಿಕೆ ಎಂದು ಟೀಕಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಜೈಶಂಕರ್ ಮಾಧ್ಯಮಗಳಿಗೆ ಕಾರ್ಯಾಚರಣೆಯ ಆರಂಭದಲ್ಲಿ ಭಾರತವು, ನಾವು ಭಯೋತ್ಪಾದಕ ನೆಲೆಗಳ ಮೇಲೆ ಮಾತ್ರ ದಾಳಿ ಮಾಡುತ್ತಿದ್ದೇವೆ ಮತ್ತು ಮಿಲಿಟರಿಯ ಮೇಲೆ ಅಲ್ಲ. ಆದ್ದರಿಂದ ನೀವು ಈ ದಾಳಿಯಿಂದ ದೂರವಿರಬೇಕು ಮತ್ತು ಮಧ್ಯಪ್ರವೇಶಿಸಬಾರದು ಎಂಬ ಸಂದೇಶವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು ಎಂದು ಹೇಳಿದ್ದರು. ಜೈಶಂಕರ್ ಅವರ ಈ ಹೇಳಿಕೆ ಕಾಂಗ್ರೆಸ್‌ನಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.
ಪಾಕಿಸ್ತಾನದೊಂದಿಗೆ ತಾವು ಎಂದಿಗೂ ಮಾತನಾಡಿಲ್ಲ. ಪಾಕಿಸ್ತಾನದ ಕೋರಿಕೆಯ ಮೇರೆಗೆ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ನಿರ್ಧಾರವನ್ನು ದ್ವಿಪಕ್ಷೀಯವಾಗಿ ತೆಗೆದುಕೊಳ್ಳಲಾಗಿದೆ ಎಂದು ಹೇಳುವ ಮೂಲಕ ಅಮೆರಿಕದ ಹಸ್ತಕ್ಷೇಪದ ಬಗ್ಗೆ ಸ್ಪಷ್ಟನೆ ನೀಡಿದರು.
ಆಪರೇಷನ್ ಸಿಂದೂರ್ ಆರಂಭವಾದ ಅರ್ಧಗಂಟೆ ನಂತರವೇ ಉಗ್ರರ ಅಡಗುತಾಣಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನಕ್ಕೆ ತಿಳಿಸಲಾಗಿದೆ. ಪಾಕಿಸ್ತಾನದ ಡಿಜಿಎಂಒ ಯುದ್ಧವನ್ನು ನಿಲ್ಲಿಸುವಂತೆ ಕೇಳಿದ ನಂತರವೇ ಆಪರೇಷನ್ ಸಿಂದೂರ್ ಅನ್ನು ನಿಲ್ಲಿಸಲಾಯಿತು. ಇದರಲ್ಲಿ ಅಮೆರಿಕದ ಮಧ್ಯಸ್ಥಿಕೆಯ ಪ್ರಶ್ನೆಯೇ ಇಲ್ಲ ಎಂದು ಅವರು ಪುನರುಚ್ಚರಿಸಿದರು ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಸಿಂಧೂ ಜಲ ಒಪ್ಪಂದವನ್ನು ಪುನರಾರಂಭಿಸಲು ಅಥವಾ ಮಾರ್ಪಡಿಸಲು ಸರ್ಕಾರ ಉದ್ದೇಶಿಸಿದೆಯೇ ಎಂದು ಸಂಸದರು ಪ್ರಶ್ನಿಸಿದರು. ಈ ಒಪ್ಪಂದವು ಪ್ರಸ್ತುತ ಸ್ಥಗಿತಗೊಂಡಿದೆ. ಅದರ ನಿಯಮಗಳನ್ನು ಮರುಪರಿಶೀಲಿಸಲು ಅಥವಾ ಬದಲಾಯಿಸಲು ಯಾವುದೇ ತಕ್ಷಣದ ಯೋಜನೆಗಳಿಲ್ಲ ಎಂದು ಸಚಿವ ಜೈಶಂಕರ್ ಹೇಳಿದ್ದಾರೆ.