ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಭಯೋತ್ಪಾದಕ ದಾಳಿಯ ವಿರುದ್ಧ ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಪಾಕಿಸ್ತಾನದ ವಿರುದ್ಧ ಭಾರೀ ಆಕ್ರೋಶ ಕೇಳಿ ಬಂದಿತ್ತು.
ಪಾಕ್‌ಗೆ ಕೇಂದ್ರ ಸರ್ಕಾರ ಆಪರೇಷನ್ ಸಿಂದೂರ್ ಮೂಲಕ ಪ್ರತ್ಯುತ್ತರ ನೀಡಿತ್ತು. ಭಾರತದಲ್ಲಿ ಹನಿಯಾ ಆಮಿರ್ ಮತ್ತು ಮಹಿರಾ ಖಾನ್ ಸೇರಿದಂತೆ ಹಲವಾರು ಪಾಕಿಸ್ತಾನಿ ನಟರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬ್ಯಾನ್ ಮಾಡಿತ್ತು.
ಆದರೆ ಇದೀಗ ಅಚ್ಚರಿ ಎಂಬಂತೆ ಪಾಕಿಸ್ತಾನದ ಕೆಲ ನಟ ನಟಿಯರ ಇನ್‌ಸ್ಟಾಗ್ರಾಮ್ ಖಾತೆಗಳು ಭಾರತದ ಬಳಕೆದಾರರಿಗೆ ಕಾಣಿಸುತ್ತಿದ್ದು, ನಟರಾದ ಮಾವ್ರಾ ಹೊಕೇನ್ , ಸಬಾ ಕಮರ್, ಆಹದ್ ರಾಜಾ ಮಿರ್ , ಯುಮ್ನಾ ಜೈದಿ ಮತ್ತು ದಾನಿಶ್ ತೈಮೂರ್ ಅವರ ಇನ್‌ಸ್ಟಾಗ್ರಾಮ್ ಖಾತೆಗಳು ಕಾಣಿಸುತ್ತಿವೆ.
ಫವಾದ್ ಖಾನ್, ಮಾಹಿರಾ ಖಾನ್, ಹನಿಯಾ ಆಮಿರ್ ಮತ್ತು ಆತಿಫ್ ಅಸ್ಲಾಂ ಸೇರಿ ಇತರ ಪಾಕ್ ನಟರ ಖಾತೆಗಳ ಮೇಲೆ ನಿಷೇಧ ಮುಂದುವರೆದಿದ್ದು, ಭಾರತದಲ್ಲಿ ಹನಿಯಾ ಆಮಿರ್ ಮತ್ತು ಮಹಿರಾ ಖಾನ್ ಸೇರಿದಂತೆ ಪಾಕಿಸ್ತಾನದ ಹಲವಾರು ಪ್ರಸಿದ್ಧ ನಟ-ನಟಿಯರ ಇನ್‌ಸ್ಟಾಗ್ರಾಮ್ ಖಾತೆಗಳು ಇನ್ನೂ ನಿಷ್ಕ್ರಿಯಗೊಂಡೇ ಇದೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ನಾಗರಿಕರು ಮೃತಪಟ್ಟಿದ್ದರಿಂದ, ಪಾಕಿಸ್ತಾನದ ನಟರು ಸೇರಿ ಹಲವರ ಇನ್‌ಸ್ಟಾಗ್ರಾಮ್ ಖಾತೆಗಳ ಮೇಲೆ ಭಾರತದಲ್ಲಿ ನಿಷೇಧ ಹೇರಲಾಗಿತ್ತು. ಈ ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ, ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಹೊತ್ತಿತ್ತು.
ಇತ್ತೀಚೆಗೆ, ಪಂಜಾಬಿ ನಟ ಮತ್ತು ಗಾಯಕ ದಿಲ್‌ಜಿತ್ ದೋಸಾಂಜ್, ಪಾಕಿಸ್ತಾನಿ ನಟಿ ಹನಿಯಾ ಆಮಿರ್ ಜೊತೆಗೆ ‘ಸರ್ದಾರ್ ಜಿ 3’ ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ತೀವ್ರ ಟೀಕೆಗೆ ಒಳಗಾಗಿದ್ದರು. ಈ ವಿವಾದದಿಂದಾಗಿ ಚಿತ್ರವು ಭಾರತದಲ್ಲಿ ಬಿಡುಗಡೆಯಾಗಿಲ್ಲ.