ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಬ್ಬ ವ್ಯಕ್ತಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗಲು ಪಾಸ್‍ಪೋರ್ಟ್ ಜೊತೆಗೆ ವೀಸಾ ಕಡ್ಡಾಯ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಭದ್ರತಾ ಸಮಸ್ಯೆಗಳಿಂದಾಗಿ ಪಾಕಿಸ್ತಾನಿ ನಾಗರಿಕರಿಗೆ ವೀಸಾ ಅರ್ಜಿ ಸಲ್ಲಿಸುವ ಕಾರ್ಯವಿಧಾನ ತುಂಬಾ ಕಠಿಣವಾಗಿದೆ. ಹಾಗಾಗಿ ಎರಡು ರಾಷ್ಟ್ರಗಳ ನಡುವೆ ವಿಮಾನ ಪ್ರಯಾಣವು ಅಸಾಮಾನ್ಯವಾಗಿದೆ. ಹೀಗಿರುವಾಗ ಪಾಕಿಸ್ತಾನದ ಉದ್ಯಮಿಯೊಬ್ಬ ಇಂಡಿಗೋ ವಿಮಾನದಲ್ಲಿ ಭಾರತಕ್ಕೆ ಬಂದಿದ್ದಾನೆ.
ಈ ಬಗ್ಗೆ ವಿಡಿಯೊ ಮಾಡಿ ಆತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದು, ಇದು ಅನೇಕರನ್ನು ಅಚ್ಚರಿಗೊಳಿಸಿದೆ.
ಪಾಕಿಸ್ತಾನದ ಉದ್ಯಮಿ ವಕಾಸ್ ಹಸನ್ ಇಂಡಿಗೊ ವಿಮಾನದಲ್ಲಿ ಭಾರತಕ್ಕೆ ಪ್ರಯಾಣಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ. ಪಾಕಿಸ್ತಾನಿ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ ವಿಮಾನದ ಮೂಲಕ ಭಾರತಕ್ಕೆ ಪ್ರಯಾಣಿಸಬಹುದು ಎಂದು ಇತ ಹೇಳಿದ್ದು, ಈಗ ಈ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ.
ಆದರೀಗ ಆತ ಇದರ ನಿಜಾಂಶವನ್ನು ಇಲ್ಲಿ ಬಹಿರಂಗಪಡಿಸಿದ್ದಾನೆ. ಸಿಂಗಾಪುರದಿಂದ ಸೌದಿ ಅರೇಬಿಯಾಕ್ಕೆ ಬರುವ ವೇಳೆ ಮುಂಬೈನಲ್ಲಿ ಆರು ಗಂಟೆಗಳ ಲೇಓವರ್ ಇರುತ್ತದೆ. ಆ ಸಮಯದಲ್ಲಿ ಹಸನ್ ಅಲ್ಲಿ ಇಳಿದು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಹಾಗೂ ವಿಡಿಯೊದಲ್ಲಿ ಪಾಕಿಸ್ತಾನಿ ಪ್ರಯಾಣಿಕರು ಅಂತಹ ಲೇಓವರ್‌ಗಳಲ್ಲಿ ಮಾತ್ರ ವಿಮಾನ ನಿಲ್ದಾಣದಲ್ಲಿ ಉಳಿಯಬಹುದು ಎಂದು ಹೇಳಿದ್ದಾನೆ.
ಮುಂಬೈ ವಿಮಾನ ನಿಲ್ದಾಣದಲ್ಲಿದ್ದಾಗ, ಹಸನ್ ಅಲ್ಲಿನ ಸೌಲಭ್ಯಗಳನ್ನು ಪಡೆದುಕೊಂಡಿದ್ದಾನಂತೆ ಹಾಗೇ ಸ್ಥಳೀಯ ತಿಂಡಿಯಾದ ವಡಾ ಪಾವ್ ಅನ್ನು ತಿಂದು ಖುಷಿ ವ್ಯಕ್ತಪಡಿಸಿದ್ದಾನೆ. ಹಾಗೇ ಭಾರತೀಯ ವಿಮಾನಯಾನ ಸಂಸ್ಥೆಯಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಪ್ರಯಾಣದ ವೆಚ್ಚ ಕಡಿಮೆ ಇರುವುದರಿಂದ ಅದನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಕೂಡ ಹೇಳಿದ್ದಾನೆ.
ಹಸನ್ ಮಾಡಿದ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಅನೇಕರು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.