ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಬ್‌ಜಿ ಆಟಗಾರನ ಪ್ರೀತಿಗೆ ಮನಸೋತು ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ (Pak national Seema Haider) ಹಾಗೂ ಪ್ರಿಯಕರ ಸಚಿನ್ ಮೀನಾ (Sachin Meena) ಹಾಗೂ ಅವರ ತಂದೆ ನೇತ್ರಪಾಲ್ ಸಿಂಗ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ಪಡೆ (UP ATS) ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದೆ.
ಪಬ್‌ಜಿ ಆನ್ಲೈನ್ ಗೇಮ್ ಆಡುವ ಮೂಲಕ ಭಾರತದ ಸಚಿನ್ ಮೀನಾ ಜತೆ ಪಾಕಿಸ್ತಾನದ ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್ ಗೆ ಪ್ರೇಮಾಂಕುರವಾಗಿತ್ತು. ಬಳಿಕ ಆತನಿಗಾಗಿ ಗಡಿಯನ್ನು ದಾಟಿ ಭಾರತಕ್ಕೆ ಬಂದಿದ್ದಳು.
ಇದೀಗ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಹೈದರ್, ಮೀನಾ ಮತ್ತು ಸಿಂಗ್ ಅವರನ್ನು ವಿಚಾರಣೆ ನಡೆಸುವುದಾಗಿ ಯುಪಿ ಎಟಿಎಸ್ ಸ್ಥಳೀಯ ಗ್ರೇಟರ್ ನೋಯ್ಡಾ ಪೊಲೀಸರಿಗೆ ತಿಳಿಸಿದೆ.
ಕಳೆದ ತಿಂಗಳು ಮೂವರನ್ನು ಗೌತಮ್ ಬುದ್ಧ ನಗರ ಪೊಲೀಸರು ಬಂಧಿಸಿದಾಗ, ಕೇಂದ್ರೀಯ ಸಂಸ್ಥೆಗಳು ಮತ್ತು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳಕ್ಕೆ ಈ ಬಗ್ಗೆ ತಿಳಿಸಲಾಗಿತ್ತು. ಆದ್ದರಿಂದ ಅವರು ತಮ್ಮ ನಿಯಮಗಳ ಪ್ರಕಾರ ತನಿಖೆ ನಡೆಸುತ್ತಿದ್ದಾರೆ ಎಂದು ಗೌತಮ್ ಬುದ್ಧ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಆನಂದ್ ಕುಲಕರ್ಣಿ ಹೇಳಿದ್ದಾರೆ.
ಪಾಕಿಸ್ತಾನದಿಂದ ಭಾರತಕ್ಕೆ ಗಡಿ ದಾಟಿ ಬಂದಿರುವ ಸೀಮಾ ಹೈದರ್ ಬಗ್ಗೆ ಸಾಕಷ್ಟು ಉಹಾಪೋಹಗಳಿವೆ. ಆಕೆ ಪಾಕಿಸ್ತಾನದ ಗೂಢಚಾರಿ ಎಂದು ಹೇಳಲಾಗುತ್ತಿದೆ. ಆಕೆ ಭಾರತಕ್ಕೆ ಅಕ್ರಮವಾಗಿ ನಸುಳಿದ್ದರ ಹಿನ್ನೆಲೆಯಲ್ಲಿ ಸಾಕಷ್ಟು ಸಂಗತಿಗಳಿವೆ. ಹಾಗಾಗಿ, ಭದ್ರತೆಯ ಹಿನ್ನೆಲೆಯಲ್ಲಿ ಸೀಮಾ ಹೈದರ್ ಅವರನ್ನು ವಿಚಾರಣೆಗೊಳಪಡಿಸುವುದು ಅತ್ಯಗತ್ಯ ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.