ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದಲ್ಲಿ ಸಿಲುಕಿರುವ ತನ್ನ ನಾಗರಿಕರಿಗೆ ವಾಘಾ ಗಡಿ ಮೂಲಕ ದೇಶಕ್ಕೆ ಮರಳಲು ಅವಕಾಶ ನೀಡುವುದಾಗಿ ಪಾಕಿಸ್ತಾನ ಶುಕ್ರವಾರ ಘೋಷಿಸಿದೆ.
ಭಾರತದ ಅಮೃತಸರ ಮತ್ತು ಪಾಕಿಸ್ತಾನದ ಲಾಹೋರ್ ಬಳಿ ಇರುವ ಅಟ್ಟಾರಿ-ವಾಘಾ ಗಡಿಯನ್ನು ಏಪ್ರಿಲ್ 30 ರವರೆಗೆ ತೆರೆದಿಟ್ಟು, ಗುರುವಾರ ಬಂದ್ ಮಾಡಲಾಗಿದೆ. ಇದರಿಂದ ಸುಮಾರು 70 ಪಾಕಿಸ್ತಾನಿ ಪ್ರಜೆಗಳು ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿತ್ತು.
ಇದೀಗ ಈ ಕುರಿತು ಪ್ರತಿಕ್ರಿಯಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ(MoFA) ವಕ್ತಾರರು, ಮಕ್ಕಳು ಸೇರಿದಂತೆ ಪಾಕಿಸ್ತಾನಿ ಪ್ರಜೆಗಳು ಭಾರತದ ಕಡೆಯ ಅಟ್ಟಾರಿ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ವರದಿಗಳನ್ನು ಒಪ್ಪಿಕೊಂಡರು. ಭಾರತೀಯ ಅಧಿಕಾರಿಗಳು ತಮ್ಮ ಕಡೆಯಿಂದ ಗಡಿ ದಾಟಲು ಅವಕಾಶ ನೀಡಿದರೆ ನಮ್ಮ ನಾಗರಿಕರನ್ನು ಸ್ವೀಕರಿಸಲು ನಾವು ಮುಕ್ತರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಭವಿಷ್ಯದಲ್ಲಿಯೂ ವಾಘಾ ಗಡಿಯು ಪಾಕಿಸ್ತಾನಕ್ಕೆ ಮರಳಲು ಬಯಸುವ ಪಾಕಿಸ್ತಾನಿ ಪ್ರಜೆಗಳಿಗೆ ಮುಕ್ತವಾಗಿರುತ್ತದೆ ಎಂದು ವಕ್ತಾರರು ಹೇಳಿದ್ದಾರೆ.