ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಭಯೋತ್ಪಾದಕ ಗುಂಪುಗಳು ಕೆಂಪು ಕೋಟೆಯಿಂದ ಕಾಶ್ಮೀರದ ಅರಣ್ಯದವರೆಗೂ ನುಗ್ಗಿ ಭಾರತವನ್ನು ಹೊಡೆದಿವೆ ಎಂದು ಪಾಕಿಸ್ತಾನದ ನಾಯಕ ಚೌಧರಿ ಅನ್ವರುಲ್ ಹಕ್ ಹೇಳುತ್ತಾ ಉದ್ಧಟತನ ಮೆರೆದಿದ್ದಾರೆ.
ನವೆಂಬರ್ 10 ರಂದು ದೆಹಲಿ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಪೋಟದಲ್ಲಿ 14 ಜನರು ಮೃತಪಟ್ಟಿದ್ದರು. ಇದನ್ನು ಕೆಂಪುಕೋಟೆ ಎಂಬ ಹೇಳಿಕೆಯಲ್ಲಿ ಹಕ್ ಉಲ್ಲೇಖಿಸಿದ್ದಾರೆ.
ಹಕ್ ಅವರ ‘ಕಾಶ್ಮೀರದ ಅರಣ್ಯಗಳು ಎಂಬ ಹೇಳಿಕೆಯು ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಸೂಚಿಸುತ್ತದೆ. ಅಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸಿ 26 ಜನರನ್ನು ಬಲಿಪಡೆದುಕೊಂಡಿದ್ದರು.
ಹಕ್ ನೀಡಿರುವ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ನೀವು ಬಲೂಚಿಸ್ತಾನವನ್ನು ರಕ್ತಸ್ರಾವ ಮಾಡುತ್ತಲೇ ಇದ್ದರೆ, ನಾವು ಕೆಂಪು ಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೆ ನುಗ್ಗಿ ಭಾರತವನ್ನು ಹೊಡೆಯುತ್ತೇವೆ ಎಂದು ನಾನು ಮೊದಲೇ ಹೇಳಿದ್ದೆ. ಅಲ್ಲಾಹುನ ಆಶೀರ್ವಾದದಿಂದ ಅದನ್ನು ನಾವು ಮಾಡಿದ್ದೇವೆ. ಶವ ಎಣಿಸಲು ಭಾರತದವರಿಗೆ ಇನ್ನೂ ಆಗಿಲ್ಲ. ಕೆಲವು ದಿನಗಳ ನಂತರ, ಶಸ್ತ್ರಸಜ್ಜಿತ ವ್ಯಕ್ತಿಗಳು ದೆಹಲಿಗೆ ಪ್ರವೇಶಿಸಿದ್ದಾರೆ. ಅವರಿಗೆ ಬಹುಶ: ಇಲ್ಲಿಯವರೆಗೆ ಎಲ್ಲಾ ಮೃತದೇಹಗಳನ್ನು ಎಣಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಆದರೆ ಭಾರತ ಇಸ್ಲಾಮಾಬಾದ್‌ನ ಹೇಳಿಕೆಗಳನ್ನು ತಿರಸ್ಕರಿಸಿದೆ. ಪಾಕಿಸ್ತಾನವು ತನ್ನ ಆರ್ಥಿಕ ಅವ್ಯವಸ್ಥೆಯನ್ನು ಮರೆಮಾಡಲು ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವುದರಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಬಲೂಚಿಸ್ತಾನದಲ್ಲಿನ ಅಶಾಂತಿಗೆ ಭಾರತವನ್ನು ಪದೇ ಪದೇ ದೂಷಿಸುತ್ತಿದೆ ಎಂದು ಹೇಳಿದೆ.

