Tuesday, December 16, 2025

ಪಾಕಿಸ್ತಾನಿ ಭಯೋತ್ಪಾದಕನೇ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್: 1597 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಏಪ್ರಿಲ್ 22ರಂದು 26 ಪ್ರವಾಸಿಗರ ಪ್ರಾಣ ತೆಗೆದ ಈ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಪ್ರಮುಖ ಪಾತ್ರವಹಿಸಿದ್ದ ಎಂದು ಅಧಿಕೃತವಾಗಿ ದಾಖಲಾಗಿದೆ. ಈ ಪ್ರಕರಣದ ಪ್ರಮುಖ ಸಂಚುಕೋರನಾಗಿ ಪಾಕಿಸ್ತಾನಿ ಉಗ್ರ ಸಾಜಿದ್ ಸೈಫುಲ್ಲಾ ಜಾಟ್‌ನ ಹೆಸರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಉಲ್ಲೇಖಿಸಿದೆ.

ಜಮ್ಮುವಿನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಲಾದ 1,597 ಪುಟಗಳ ಆರೋಪಪಟ್ಟಿಯಲ್ಲಿ, ನಿಷೇಧಿತ ಎಲ್‌ಇಟಿ ಹಾಗೂ ಅದರ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಈ ದಾಳಿಯನ್ನು ಯೋಜಿಸಿ ಕಾರ್ಯಗತಗೊಳಿಸಿದ್ದಾಗಿ ಸ್ಪಷ್ಟಪಡಿಸಲಾಗಿದೆ. ಪಾಕ್ ಪ್ರಾಯೋಜಿತ ಭಯೋತ್ಪಾದನೆಯ ಪಿತೂರಿ, ಹಣಕಾಸು ನೆರವು ಮತ್ತು ಗಡಿ ದಾಟಿದ ಸಂಯೋಜನೆಗಳ ವಿವರಗಳು ಆರೋಪಪಟ್ಟಿಯಲ್ಲಿ ಸೇರಿವೆ. ಈ ಹಿನ್ನೆಲೆಯಲ್ಲಿ ಸಾಜಿದ್ ಜಾಟ್‌ನ್ನು ಹಿಡಿದುಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.

ಎನ್‌ಐಎ ಮಾಹಿತಿ ಪ್ರಕಾರ, ಸಾಜಿದ್ ಜಾಟ್ ಇಸ್ಲಾಮಾಬಾದ್‌ನಿಂದ ಕಾರ್ಯನಿರ್ವಹಿಸುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ಹಲವು ಉಗ್ರ ದಾಳಿಗಳ ಹಿಂದಿನ ಮಾಸ್ಟರ್‌ಮೈಂಡ್ ಎನ್ನಲಾಗಿದೆ. ಸುಮಾರು ಎಂಟು ತಿಂಗಳ ಕಾಲ ನಡೆದ ವೈಜ್ಞಾನಿಕ ಹಾಗೂ ತಾಂತ್ರಿಕ ತನಿಖೆ ಮೂಲಕ ಪಹಲ್ಗಾಮ್ ದಾಳಿಗೂ ಪಾಕಿಸ್ತಾನಕ್ಕೂ ಇರುವ ನಂಟನ್ನು ದೃಢಪಡಿಸಲಾಗಿದೆ.

error: Content is protected !!