ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ಸಹಯೋಗದಲ್ಲಿ ಪಾಕಿಸ್ಥಾನವು ಮಂಡಿಸಿದ ’ಇಸ್ಲಾಮೊಫೋಬಿಯಾವನ್ನು ಎದುರಿಸಲು ಕ್ರಮಗಳು’ ಕುರಿತ ನಿರ್ಣಯವನ್ನು ವಿಶ್ವ ಸಂಸ್ಥೆ ಸಾಮನ್ಯ ಸಭೆಯಲ್ಲಿ ಅಂಗೀಕರಿಸಲಾಗಿದೆ.
ಇದೇ ವೇಳೆ ಈ ಕರಡು ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರವೇ ಉಳಿದಿದೆ. ಜೊತೆಗೆ ಇದೇ ಸಂದರ್ಭ ಕೇವಲ ಒಂದು ಧರ್ಮವನ್ನು ಪ್ರತ್ಯೇಕಿಸುವ ಬದಲು, ಹಿಂಸೆ, ತಾರತಮ್ಯ ಎದುರಿಸುತ್ತಿರುವ ಹಿಂದು, ಬೌದ್ಧ, ಸಿಖ್ ಮತ್ತು ಇತರ ಧರ್ಮಗಳ ವಿರುದ್ಧದ ಧರ್ಮ ದ್ವೇಷವನ್ನೂ ಖಂಡಿಸಬೇಕು ಎಂಬುದು ಅನಿವಾರ್ಯ ಎಂದು ಭಾರತ ಪ್ರತಿಪಾದಿಸಿದೆ.
ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಂಬೋಜ್ ಪ್ರತಿಕ್ರಿಸಿ, ನಾವು ಹಿಂದು, ಬೌದ್ಧ ಮತ್ತು ಸಿಖ್ ವಿರೋಧಿ ಭಾವನೆಗಳ ವಿರುದ್ಧ ನಿಲುವು ಹೊಂದಿದ್ದೇವೆ. ಅದು ಕ್ರಿಶ್ಚಿಯನ್‌ಫೋಬಿಯಾ ಅಥವಾ ಇಸ್ಲಾಮೊಫೋಬಿಯಾ ಆಗಿರಬಹುದು. ಎಲ್ಲಾ ರೀತಿಯ ಧಾರ್ಮಿಕ ಫೋಬಿಯಾ ವಿರುದ್ಧವಾದ ನಿಲುವು ನಮ್ಮದು ಎಂದು ಹೇಳಿದ್ದಾರೆ.
193 ಸದಸ್ಯರ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಮಂಡಿಸಿದ ನಿರ್ಣಯವನ್ನು ಅಂಗೀಕರಿಸಲಾಗಿದೆ. 115 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದ್ದರೆ, ಯಾವುದೇ ರಾಷ್ಟ್ರ ಈ ನಿರ್ಣಯದ ವಿರುದ್ಧ ಮತ ಚಲಾಯಿಸಲಿಲ್ಲ. ಇನ್ನು ಭಾರತ, ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಇಟಲಿ, ಉಕ್ರೇನ್ ಮತ್ತು ಬ್ರಿಟನ್ ಸೇರಿ 44 ರಾಷ್ಟ್ರಗಳು ಮತದಾನದಿಂದ ದೂರವುಳಿದಿದ್ದವು.
ಇದೇ ವೇಳೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಯೋಧ್ಯೆ ರಾಮಮಂದಿರ, ಸಿಎಎ ಬಗ್ಗೆ ವಿಷಯ ಪ್ರಸ್ತಾಪಿಸಿರುವ ಪಾಕಿಸ್ತಾನವನ್ನು ಭಾರತ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ