ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ನಡೆಸಿದ ಆಪರೇಷನ್ ಸಿಂದೂರ ವೇಳೆ ನಮಗೆ ಹೆಚ್ಚಿನ ನಷ್ಟ ಆಗಿಲ್ಲ. ನಾವೇ ಗೆದ್ದಿದ್ದೇವೆ ಎಂದು ಪಾಕಿಸ್ತಾನ ಹೇಳುತ್ತಾ ಬಂದಿದೆ. ಆದರೆ ಆಪರೇಷನ್ ಕಾರ್ಯಾಚರಣೆ ವೇಳೆಯಲ್ಲಿ ಮುರ್ಕೆಡೆಯಲ್ಲಿದ್ದ ಉಗ್ರರ ಪ್ರಮುಖ ತರಬೇತಿ ಶಿಬಿರ ಮರ್ಕಜ್ -ಎ- ತೊಯ್ಬಾ ಕಟ್ಟಡ ನಾಶವಾಗಿರುವುದಾಗಿ ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (LET) ಕಮಾಂಡರ್ ಹಫೀಜ್ ಅಬ್ದುಲ್ ರೌಫ್ ಒಪ್ಪಿಕೊಂಡಿದ್ದಾನೆ.
ಸಭೆಯೊಂದರಲ್ಲಿ ಮಾತನಾಡಿರುವ ಅಮೆರಿಕ ಘೋಷಿತ ಜಾಗತಿಕ ಉಗ್ರ ರೌಫ್, ‘ಆಪರೇಷನ್ ಸಿಂದೂರ’ ಬಹಳ ದೊಡ್ಡ ದಾಳಿಯಾಗಿದ್ದು, ಉಗ್ರರ ತರಬೇತಿ ಶಿಬಿರದ ಇಡೀ ಕಟ್ಟಡವನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಿದ್ದಾನೆ.
ಮೇ 6-7 ರಂದು ಏನಾಯಿತು ಅಂದ್ರೆ, ನಾವು ಸೇರುತ್ತಿದ್ದ ಜಾಗ ಮಸೀದಿಯಾಗಿ ಉಳಿದಿಲ್ಲ. ನಾವು ಈಗ ಅಲ್ಲಿ ಕುಳಿತುಕೊಳ್ಳಲು ಸಹ ಆಗಲ್ಲ. ಅದು ಸಂಪೂರ್ಣ ಧ್ವಂಸಗೊಂಡಿದೆ ಎಂದು ಹೇಳಿದ್ದಾನೆ. ಈ ಮೂಲಕ ಭಾರತದ ಕಾರ್ಯಾಚರಣೆಯು ಅದರ ಉದ್ದೇಶಿತ ಗುರಿಯನ್ನು ತಲುಪಿದೆ ಎಂದು LET ಉಗ್ರ ಸಂಘಟನೆಯೇ ದೃಢಪಡಿಸಿದೆ.
ರೌಫ್ ಲಷ್ಕರ್‌ನ ಕಾರ್ಯಾಚರಣೆಯ ಕಮಾಂಡರ್ ಆಗಿದ್ದು, ಭಯೋತ್ಪಾದಕರಿಗೆ ತರಬೇತಿ ನೀಡುವುದರಲ್ಲಿ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಪಾಕಿಸ್ತಾನ ಸೇನೆ ಪ್ರಾಯೋಜಿತ ಲಾಂಚ್‌ಪ್ಯಾಡ್‌ಗಳಿಂದ ಉಗ್ರರನ್ನು ಗಡಿಯೊಳಗೆ ನುಸುಳಿಸುವುದರಲ್ಲಿ ತೊಡಗಿಸಿಕೊಂಡಿದ್ದಾನೆ.
ಭಾರತ- ಪಾಕ್ ಸೇನಾ ಸಂಘರ್ಘದ ವೇಳೆ ಚೀನಾದ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಪಾಕಿಸ್ತಾನ ಮತ್ತು ಎಲ್ಇಟಿ ಬಳಸಿದೆ ಎಂಬುದನ್ನು ರೌಫ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಅಲ್ಲಾ ನಮ್ಮನ್ನು ರಕ್ಷಿಸಿದನು, ಅಲ್ಲಾ ನಮಗೆ ಸಹಾಯ ಮಾಡಿದನು ಎಂದು ಹೇಳುತ್ತಾ, ಭಾರತ ಹೇಗೆ ಪೆಟ್ಟು ನೀಡಿದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ.
ಇದು ಪಾಕಿಸ್ತಾನದ ಉಗ್ರ ಮುಖವಾಡವನ್ನು ಮತ್ತೊಮ್ಮೆ ಬಟ ಬಯಲು ಮಾಡಿದೆ. ಉಗ್ರರಿಗೆ ತನ್ನ ನೆಲದಲ್ಲಿ ಜಾಗ ನೀಡಿಲ್ಲ ಎಂದು ಪಾಕಿಸ್ತಾನ ಹೇಳುತ್ತಾ ಬಂದಿದ್ದರೂ ರೌಫ್ ಅವರ ಹೇಳಿಕೆಯ ವಿಡಿಯೋಗಳು ಸಾಕಷ್ಟು ವೈರಲ್ ಆಗಿದ್ದು, ಪಾಕಿಸ್ತಾನದ ಉಗ್ರನೀತಿಯನ್ನು ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಗ ಜಹ್ಹೀರು ಮಾಡಿದೆ.


