ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಪಾಕ್ ನಡುವಿನ ಕದನ ವಿರಾಮ ವಿಚಾರವಾಗಿ ಟ್ರಂಪ್ ಮಾತು ಹಾಗೂ ವಿಪಕ್ಷಗಳ ಆರೋಪಕ್ಕೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ. ವಿಶ್ವದ ಯಾವ ನಾಯಕನೂ ಆಪರೇಷನ್ ಸಿಂಧೂರ ನಿಲ್ಲಿಸಲು ಹೇಳಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಪರೇಷನ್ ಸಿಂಧೂರ ಚರ್ಚೆಗೆ ಲೋಕಸಭೆಯಲ್ಲಿ ಉತ್ತರಿಸಿದ ಅವರು, ವಿಶ್ವದ ಯಾವ ನಾಯಕನೂ ಆಪರೇಷನ್ ನಿಲ್ಲಿಸಲು ಹೇಳಲಿಲ್ಲ. ಅಮೆರಿಕ ಉಪಾಧ್ಯಕ್ಷ, ಪಾಕ್ ದೊಡ್ಡ ದಾಳಿ ಮಾಡಲಿದೆ ಎಂದಿದ್ದರು. ಪಾಕ್ ದಾಳಿ ಮಾಡಿದರೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದೆ. ಅಮೆರಿಕ ಉಪಾಧ್ಯಕ್ಷ ನನ್ನ ಜೊತೆಗೆ ಮಾತನಾಡಲು ಪ್ರಯತ್ನಿಸಿದರು. ಸೇನೆಯ ಜೊತೆಗೆ ಮಾತನಾಡುತ್ತಿದ್ದೆ, ಸಾಧ್ಯವಾಗಲಿಲ್ಲ. ಆಮೇಲೆ ವಾಪಸ್ ಫೋನ್ ಮಾಡಿ ಅವರ ಜೊತೆಗೆ ಮಾತನಾಡಿದೆ. ಪಾಕಿಸ್ತಾನ ದೊಡ್ಡ ದಾಳಿ ಮಾಡುವುದಿದೆ ಎಂದು ಎಚ್ಚರಿಕೆ ನೀಡಿದರು. ಅವರ ಉದ್ದೇಶ ದಾಳಿಯಾಗಿದ್ದರೆ, ಅದು ಅವರಿಗೆ ದುಬಾರಿಯಾಗಲಿದೆ ಎಂದು ಉತ್ತರಿಸಿದೆ. ಗುಂಡಿನ ಉತ್ತರ ಗುಂಡಿನಿಂದಲೇ ಕೊಡುತ್ತೇವೆ ಎಂದು ಹೇಳಿದ್ದೆ ಎಂದು ಮೋದಿ ತಿಳಿಸಿದ್ದಾರೆ.