ಹೊಸದಿಗಂತ ವರದಿ, ವಿಜಯಪುರ:
ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿರುವುದು, ಕರ್ನಾಟಕದಲ್ಲಿ ಮುಂದೆ 150ಕ್ಕೂ ಅಧಿಕ ಸ್ಥಾನ ಗಳಿಸಿಕೊಡುವ ವಿಶ್ವಾಸ ಮೂಡಿಸಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಐಎಂಐಎಂ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಅವರಿಂದ ಯಾರಿಗೆ ಲಾಭ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಎಂದರು.
ಅಲ್ಲದೇ, ಶಾಸಕ ಎಂ.ಬಿ. ಪಾಟೀಲ, ನಾನು ಆರು ತಿಂಗಳಿಂದ ಮಾತಾಡಿಲ್ಲ. ಅವರು ರಾಜ್ಯ ನಾಯಕರು. ನಾನೊಬ್ಬ ಶಾಸಕ. ನಮ್ಮ ಪಕ್ಷದಲ್ಲಿ ಪ್ರಾಮಾಣಿಕ ಚುನಾವಣೆ ಆಗಿದೆ. ಕಾಂಗ್ರೆಸ್ ನಲ್ಲಿಯೇ ವಿಭಿನ್ನ ರೀತಿ ಆಗಿದೆ ಎಂದರು.
ಶಾಸಕ ಅಭಯ ಪಾಟೀಲ ಮಾತನಾಡಿ, ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಅಭಿವೃದ್ಧಿ ಕಾರ್ಯಗಳು ಹಾಗೂ ಪಕ್ಷದ ಸಾಧನೆ ಕಂಡ ಮತದಾರ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿದ್ದಾರೆ ಎಂದರು.
ಮೊದಲ ಬಾರಿ ಇಷ್ಟು ಸ್ಥಾನಗಳು ಬಂದಿರುವುದು ನಗರ ಶಾಸಕರ ಪ್ರಯತ್ನ ಹಾಗೂ ಹಿಂದುತ್ವವೇ ಕಾರಣ ಆಗಿದೆ. ಅಲ್ಲದೇ, ಕಾರ್ಯಕರ್ತರು, ಮುಖಂಡರ ಸೇವೆ ಕೂಡ ಮಹತ್ವದಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಶಾಸಕ ಪಿ. ರಾಜೀವ್, ಮುಖಂಡರಾದ ಚಂದ್ರಶೇಖರ ಕವಟಗಿ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.