ಜೆಡಿಎಸ್ ಪಕ್ಷ ಸಂಘಟನೆಗೆ ಪಂಚರತ್ನ, ಜಲಧಾರೆ ಸಾಥ್: ಎಚ್.ಡಿ. ದೇವೇಗೌಡ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಮಂಗಳೂರಿನಲ್ಲಿ ನಮ್ಮ ಶಕ್ತಿ ಕಡಿಮೆಯಿದೆ, ಅಲ್ಲಿಂದಲೇ ಪಕ್ಷ ಸಂಘಟನೆ ಆರಂಭಿಸಿದ್ದೇವೆ. ಪಂಚರತ್ನ ಮತ್ತು ಜಲಧಾರೆ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಿಂಗಳಲ್ಲಿ ಕನಿಷ್ಟ ಎರಡು ಜಿಲ್ಲೆಗಳಲ್ಲಿ ಪ್ರವಾಸ ಮಾಡಲು ತೀರ್ಮಾನಿಸಿದ್ದೇವೆ. ಅನೇಕ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಇದೆ, ಆದರೆ ಕಾರ್ಯೋನ್ಮುಖರಾಗಿ ಕೆಲಸ ಮಾಡುವಲ್ಲಿ ಹಿಂದೆ ಬಿದ್ದಿದಾರೆ ಎಂದರು.

ಮಂಗಳೂರಿನಲ್ಲಿ ಫಾರುಕ್ ಕೆಲಸ ಮಾಡುತ್ತಿದ್ದಾರೆ. ನಾನು ಮಂಗಳೂರಿಗೆ ಹೋದ ಮೇಲೆ ಕನಿಷ್ಠ ನೂರಾರು ಜನ ಕಾರ್ಯಕರ್ತರು ಲವಲವಿಕೆಯಿಂದ ಸೇರಿದ್ದರು. ಕೇವಲ 123 ಅಂತಾ ಬೋರ್ಡ್ ಹಾಕಿಕೊಂಡರೆ ಆಗಲ್ಲ. ಕೆಲಸ ಮಾಡಬೇಕು ಎಂದ ಎಚ್‌ಡಿ ದೇವೇಗೌಡ್ರು, ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರ ಸಭೆಗಳನ್ನು ಮಾಡುತ್ತಿದ್ದಾರೆ. ಜಲಧಾರೆ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಹೇಳಿದರು.

ಹಾಸನದಲ್ಲಿ ಕಾರ್ಯಕ್ರಮ ಮಾಡಿದಾಗ ಶಿವಲಿಂಗೇ ಗೌಡ ಬಂದಿರಲಿಲ್ಲ, ಎ.ಟಿ. ರಾಮಸ್ವಾಮಿ ಕೂಡ ಕಾರ್ಯನಿಮಿತ್ತ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ರಾಮಸ್ವಾಮಿ ಪಕ್ಷದಲ್ಲಿ ಇರಲು ಆಗಲ್ಲ ಅಂದ್ರೆ ಹೋಗಬಹುದು ಎಂದಿದ್ದೇನೆ ಎಂದು ಪತ್ರಿಕೆಯೊಂದರಲ್ಲಿ ಬಂದಿದೆ. ಅದ್ಯಾಕೆ ಈ ರೀತಿ ಬರೆದರೋ ಗೊತ್ತಿಲ್ಲ. ಪಕ್ಷ ಬಿಟ್ಟು ಹೋಗಲು ಮನಸು ಮಾಡಿರುವವರಿಗೆ ಈಗಲೂ ಮನವಿ ಮಾಡುತ್ತೇನೆ, ಐಕ್ಯತೆಯಿಂದ ಕೆಲಸ ಮಾಡೋಣ ಬನ್ನಿ ಎಂದರು.

ಸಿಎಂ ಇಬ್ರಾಹಿಂ ಪಕ್ಷ ಸೇರ್ಪಡೆ ವಿಚಾರದ ಕುರಿತು ಮಾತನಾಡಿದ ದೇವೇಗೌಡ ಅವರು, ನಮ್ಮಲ್ಲಿ ಈಗ ಒಬ್ಬರು ರಾಜ್ಯಾಧ್ಯಕ್ಷರಾಗಿ ಇದ್ದಾರೆ. ಅವರು ಆರು ಸಲ ಗೆದ್ದವರು. ಅವರನ್ನು ನಾಳೆ ಬೆಳಗ್ಗೆಯೇ ಅಧಿಕಾರದಿಂದ ಇಳಿಸಲು ಆಗುತ್ತಾ? ಎಂದು ಪ್ರಶ್ನಿಸಿದರು. ಸಿಎಂ ಇಬ್ರಾಹಿಂ ಅವರಿಗೆ ಇಷ್ಟೇ ಹೇಳಿದ್ದೇವೆ,
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ವೇಳೆ ನಿಮ್ಮನ್ನು ಗಣನೆಗೆ ತೆಗೆದುಕೊಳ್ಳುತ್ತೇವೆಂದು ಭರವಸೆ ಕೊಟ್ಟಿದ್ದೇವೆ ಎಂದರು.

ಎಚ್‌ಡಿಕೆ ಚನ್ನಪಟ್ಟಣದಿಂದಲೇ ಸ್ಪರ್ಧಿಸಲಿ:
ಕುಮಾರಸ್ವಾಮಿ ಅವರು ಯಾಕೆ ಚಾಮುಂಡೇಶ್ವರಿಯಿಂದ ಸ್ಪರ್ಧೆ ಮಾಡಬೇಕು. ರಾಮನಗರ, ಚನ್ನಪಟ್ಟಣ ಬಿಟ್ಟು ಬೇರೆ ಕಡೆ ಯಾಕೆ ಹೋಗಬೇಕು? ಕುಮಾರಸ್ವಾಮಿ ಎಲ್ಲಿ ಸ್ಪರ್ಧೆ ಮಾಡಬೇಕು ಅನ್ನುವುದಕ್ಕೆ ದೈವದ ಆಟ ನಿರ್ಧಾರ ಮಾಡುತ್ತದೆ. ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ, ಅಲ್ಲಿಂದಲೇ ಸಿಎಂ ಕೂಡ ಆಗಿದ್ದಾರೆ. ಹಾಗಾಗಿ ಮತ್ತೆ ಅಲ್ಲಿಂದಲೇ ಸ್ಪರ್ಧೆ ಮಾಡಲಿ ಅನ್ನುವುದು ನನ್ನ ಅಭಿಪ್ರಾಯ ಎಂದು ದೇವೇಗೌಡ ಹೇಳಿದರು.

ನಿಖಿಲ್ ಭವಿಷ್ಯ ಕುಮಾರಸ್ವಾಮಿ ಕೈಯಲ್ಲಿ:
ನಿಖಿಲ್ ಈಗ ಸಿನಿಮಾ ಜಗತ್ತಿನಲ್ಲಿದ್ದಾರೆ, ಯುವ ಜನತಾದಳದ ಅಧ್ಯಕ್ಷ ಆಗಿದ್ದಾರೆ. ಸಿನಿಮಾ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ. ಅಂತಿಮವಾಗಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೋ ಅಥವಾ ಸಿನಿಮಾದಲ್ಲಿ ಮುಂದುವರೆಯಬೇಕೋ ಎಂಬ ವಿಚಾರ ಕುಮಾರಸ್ವಾಮಿ ಅವರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಹಿಜಾಬ್ ವಿವಾದ ಆರಂಭ ಆಗುತ್ತಿದ್ದಂತೆ ಹಾಗೇ ಅದನ್ನು ಚಿವುಟಿ ಹಾಕುವ ಕೆಲಸ ಮಾಡಬೇಕಿತ್ತು. ಅದನ್ನು ಎರಡೂ ರಾಷ್ಟ್ರೀಯ ಪಕ್ಷಗಳೂ ಮಾಡಬೇಕಿತ್ತು. ಇನ್ನು ಕೋರ್ಟ್ ಏನು ತೀರ್ಪು ಕೊಡುತ್ತೋ ಅದನ್ನು ಒಪ್ಪಬೇಕು. ಹೈಕೋರ್ಟ್‌ನಲ್ಲಿ ಏನೂ ತೀರ್ಮಾನವಾಗುತ್ತದೆ. ಆ ಬಗ್ಗೆ ನಾನೇನೂ ಮಾತನಾಡುವುದಿಲ್ಲ, ಒಂದು ಬಾರಿ ನ್ಯಾಯಾಲಯ ತೀರ್ಪು ಕೊಟ್ಟರೆ ಮತ್ತೆ ನಾವು ಪ್ರಶ್ನೆ ಮಾಡಬಾರದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಭಿಪ್ರಾಯ ಪಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!