ಹೊಸದಿಗಂತ ವರದಿ,ಶಿವಮೊಗ್ಗ :
ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡೆಸುತ್ತಿರುವ ಪಂಚರತ್ನ ಯಾತ್ರೆ ಪಂಕ್ಚರ್ ಆಗಿದ್ದರೆ, ಪ್ರಜಾ ಧ್ವನಿಯಾತ್ರೆ ಬ್ರೇಕ್ ಫೇಲ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ನಗರ ಬಿಜೆಪಿ ವತಿಯಿಂದ ಭಾನುವಾರ ಆಯೋಜಿಸಿದ್ದ ಪೇಜ್ ಪ್ರಮುಖರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಹಂತಹಂತವಾಗಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದು, ಈಗ ಪೇಜ್ ಪ್ರಮುಖರ ಸಮಾವೇಶ ನಡೆಸುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.
ಗುಜರಾತ್ನಲ್ಲಿ ಗೆಲ್ಲಲು ಪೇಜ್ ಪ್ರಮುಖರ ಪಾತ್ರ ಅತೀ ಮುಖ್ಯವಾಗಿತ್ತು. ಅದೇ ರೀತಿಯಲ್ಲಿ ಕರ್ನಾಟಕದಲ್ಲಿಯೂ ಕೆಲಸ ಮಾಡಲಾಗುತ್ತಿದೆ. ಬಿಜೆಪಿಗೆ ಮತದಾರರ ಪಟ್ಟಿಯೇ ಭಗವದ್ಗೀತೆ. ಹೀಗಾಗಿ ಒಂದು ಪೇಜ್ಗೆ ಆರು ಪ್ರಮುಖರನ್ನು ನೇಮಿಸಲು ಮುಂದಾಗಿದೆ. ಆದರೆ ಕಾಂಗ್ರೆಸ್ಗೆ ಪೇಜ್ ಗೆ ಒಬ್ಬರು ಇರಲಿ ಪುಸ್ತಕಕ್ಕೊಬ್ಬ ಪ್ರಮುಖರು ಸಿಕ್ಕುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ, ಜೆಡಿಎಸ್ 20 ಸ್ಥಾನಗಳನ್ನು ಪಡೆಯುವುದಿಲ್ಲ. ಬಿಜೆಪಿ 150 ಸ್ಥಾನಗಳನ್ನು ಪಡೆದು ಬಹುಮತದಿಂದ ಅಧಿಕಾರ ಹಿಡಿಯಲಿದೆ ಎಂದರು.
ಡಿ.ಕೆ.ಶಿವಕುಮಾರ್ ರಾಜ್ಯಾಧ್ಯಕ್ಷರಾದ ಬಳಿಕ ರಾಜ್ಯ ಸಮಿತಿಗೆ ಒಬ್ಬ ಸದಸ್ಯರನ್ನು ನೇಮಿಸಲು ಆಗಿಲ್ಲ. ಆದರೆ ಬಿಜೆಪಿ ಬೂತ್ಮಟ್ಟದಲ್ಲಿ ನೇಮಕ ಮಾಡಿದೆ. ಕರ್ನಾಟಕಲ್ಲಿ ಕಾಂಗ್ರೆಸ್ ಕುಕ್ಕರ್ ಬಂಬ್ನವರಿಗೆ ಬೆಂಬಲಿತ್ತಿದೆ. ಜತೆಗೆ ಆ ಪಕ್ಷವೇ ಇನ್ನೊಂದು ಭಯೋತ್ಪಾದನ ಪಕ್ಷವಾಗಿದೆ. ಗೋಹತ್ಯೆ, ಮತಾಂತರದ ವಿರುದ್ಧ ಎಲ್ಲಿಯೂ ಮಾತನಾಡುತ್ತಿಲ್ಲ ಎಂದು ಹರಿಹಾಯ್ದರು.
ರಾಹುಲ್ ಗಾಂಧಿ ಮಾಡಿರುವುದು ಬರೀ ಪಾದಯಾತ್ರೆ ಅಷ್ಟೆ. ಭಾರತ್ ಜೋಡೋ ಯಾತ್ರೆಯನ್ನು ಈ ಹಿಂದೆಯೇ ಮೋದಿ ಮಾಡಿದ್ದಾರೆ. ರಾಹುಲ್ ಹೋದ ಕಡೆಯಲ್ಲೆಲ್ಲಾ ಆ ಪಕ್ಷಕ್ಕೆ ಸೋಲಾಗಿ ಬಿಜೆಪಿ ಗೆದ್ದಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಎಂದು ಪಕ್ಷ ಎರಡು ಹೋಳಾಗಿದ್ದರೆ, ಮಲ್ಲಿಕಾರ್ಜುನ ಖರ್ಗೆ 3 ನೇ ಪಾರ್ಟಿ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ನ ದುಸ್ಥಿತಿ ಎಂದು ಹೇಳಿದರು.