ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಲಪಾಡಿ ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋಣಗಳ ಹಿಂಡೊಂದು ಅತ್ತಿತ್ತ ಸಂಚರಿಸುತ್ತಿರುವುದು ಕಂಡು ಬಂದಿದ್ದು, ಇದು ಜನರಲ್ಲಿ ಸಂಚಾರ ದಟ್ಟಣೆ ಹಾಗೂ ಅಪಘಾತದ ಭೀತಿ ಸೃಷ್ಟಿಸಲು ಕಾರಣವಾಯಿತು.
ಕೂಡಲೇ ರಾಷ್ಟ್ರೀಯ ಹೆದ್ದಾರಿ ಭದ್ರತಾ ಇಲಾಖೆ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಆಗಮಿಸಿ ಕೋಣಗಳ ಹಿಂಡನ್ನು ಸರ್ವೀಸ್ ರಸ್ತೆಗೆ ತಿರುಗಿಸಿರುವುದರಿಂದ ಸಂಭವಿಸಬಹುದಾದ ಭಾರೀ ಅಪಘಾತ ತಪ್ಪಿ ಹೋಯಿತು.
ಕಸಾಯಿಖಾನೆಗೆ ತಂದಿದ್ದ ಸುಮಾರು 12 ಕೋಣಗಳು ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸಿತು. ಕೋಣಗಳಿಗೆ ರಸ್ತೆಯಿಂದ ಹೊರಬರಲು ಸಾಧ್ಯವಾಗದೆ ರಸ್ತೆಯುದ್ದಕ್ಕೂ ಅತ್ತಿಂದಿತ್ತ ಸಂಚರಿಸುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಲಾದ ಕ್ಯಾಮರಾ ಮೂಲಕ ಕೋಣಗಳ ಹಿಂಡು ರಸ್ತೆಗೆ ಪ್ರವೇಶಿಸುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿತು.

ಇದರೊಂದಿಗೆ ಅಪಘಾತವನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಭದ್ರತಾ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಗೆ ತಕ್ಷಣ ಮಾಹಿತಿ ನೀಡಲಾಯಿತು. ಅಧಿಕಾರಿಗಳು ಸ್ಥಳಕ್ಕೆ ತಲುಪುವ ವೇಳೆ ಕೋಣಗಳ ಹಿಂಡು ಕಾಸರಗೋಡು ನಗರದ ಕಡೆ ಸಾಗಿತು. ಅವುಗಳನ್ನು ರಸ್ತೆಯಿಂದ ರಸ್ತೆಯ ಬದಿಗೆ ಸರಿಸಲು ಹರಸಾಹಸ ಪಡಲಾಯಿತು.
ಅಡ್ಕತ್ತಬೈಲ್‌ನಿಂದ ಹೆದ್ದಾರಿಗೆ ಪ್ರವೇಶಿಸಿದ ಕೋಣಗಳ ಹಿಂಡು ರಸ್ತೆಯುದ್ದಕ್ಕೂ ಸುಮಾರು ೫ ಕಿಲೋಮೀಟರ್ ಸಂಚರಿಸಿತು. ಭದ್ರತಾ ತಂಡ ಬರುವ ವರೆಗೆ ಕೋಣಗಳು ರಸ್ತೆಯಲ್ಲೇ ಸಂಚಾರ ನಡೆಸುತ್ತಿತ್ತು. ಹೆದ್ದಾರಿಯ ರಸ್ತೆಯ ಪಕ್ಕಕ್ಕೆ ಸ್ಥಳಾಂತರಿಸಿದ ಬಳಿಕ ಅವುಗಳನ್ನು ಮುಂದಿನ ನಿರ್ಗಮನ ಸ್ಥಳವಾದ ಅಣಂಗೂರಿಗೆ ಅಟ್ಟಲಾಗಿದ್ದು, ಬಳಿಕ ಸರ್ವೀಸ್ ರಸ್ತೆಗೆ ಬಿಡಲಾಯಿತು. ಸಕಾಲದಲ್ಲಿ ಭದ್ರತಾ ತಂಡ ಮತ್ತು ಅಗ್ನಿಶಾಮಕ ದಳದವರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಭಾರೀ ದೊಡ್ಡ ದುರಂತ ತಪ್ಪಿ ಹೋಯಿತು.

