ಅನೇಕರು ಡಿಪ್ರೆಷನ್ ಅಥವಾ ಮಾನಸಿಕ ಒತ್ತಡವನ್ನು ವಯಸ್ಕರ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ ಇದು ಮಕ್ಕಳಲ್ಲೂ ಉಂಟಾಗುತ್ತದೆ. ಶಾಲಾ ಒತ್ತಡ, ಮನೆಯ ಪರಿಸ್ಥಿತಿ, ಗೆಳೆಯರ ಪ್ರಭಾವ, ಹೀನಮನೋಭಾವ – ಇವುಗಳೆಲ್ಲವೂ ಮಕ್ಕಳು ಡಿಪ್ರೆಷನ್‌ಗೆ ಒಳಗಾಗಲು ಕಾರಣವಾಗಬಹುದು. ಮಕ್ಕಳಲ್ಲಿನ ಡಿಪ್ರೆಷನ್ ಅನ್ನು ಗುರುತಿಸುವುದು ಸುಲಭವಲ್ಲ. ಏಕೆಂದರೆ ಅವರು ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಕಷ್ಟಪಡುತ್ತಾರೆ. ಆದ್ದರಿಂದ, ಕೆಲವೊಂದು ಲಕ್ಷಣಗಳನ್ನು ಗಮನಿಸಿದರೆ ತಕ್ಷಣ ಪರಿಹಾರ ಕೈಗೊಳ್ಳಬಹುದಾಗಿದೆ.
ನಿರಂತರ ನೊಂದುಕೊಳ್ಳುವುದು ಅಥವಾ ದುಃಖಿತರಾಗಿರುವುದು (Persistent Sadness or Irritability):
ಮಕ್ಕಳು ದಿನವಿಡಿ ಬೇಸರದಲ್ಲಿದ್ದಂತೆ ಕಾಣುತ್ತಾರೆ, ಮಾತನಾಡಿದರೆ ಅತಿಯಾಗಿ ಪ್ರತಿಕ್ರಿಯಿಸುತ್ತಾರೆ ಅಥವಾ ಬೇಸರದಿಂದ ಕುಳಿತಿರುತ್ತಾರೆ. ಕೆಲವು ಮಕ್ಕಳಲ್ಲಿ ಖಿನ್ನತೆ ದುಃಖದಿಂದ ಅಲ್ಲ, ಬದಲಿಗೆ ಕೋಪದಿಂದ ವ್ಯಕ್ತವಾಗಬಹುದು.
ಓದು – ಆಟದಲ್ಲಿ ಆಸಕ್ತಿಯ ಕೊರತೆ (Loss of Interest in Play or School):
ಇಷ್ಟಪಡುವ ಆಟಗಳಲ್ಲಿ, ಓದಿನಲ್ಲಿ ಅಥವಾ ಆಕ್ಟಿವಿಟಿಗಳಲ್ಲಿ ಆಸಕ್ತಿಯ ಕೊರತೆ ಕಾಣಿಸಿಕೊಳ್ಳಬಹುದು. ಅವರು ತಮ್ಮ ಗೆಳೆಯರಿಂದ ದೂರವಿರಬಹುದು ಅಥವಾ ಎಲ್ಲದ್ರಿಂದ ಹಿಂದೆ ಸರಿಯಬಹುದು.
ನಿದ್ರೆ ಸಮಸ್ಯೆಗಳು ಮತ್ತು ತಿನ್ನಲು ಆಸಕ್ತಿ ಕಡಿಮೆಯಾಗುವುದು (Sleep and Appetite Changes):
ಏನೋ ಕಳೆದು ಕೊಂಡಿರುವಂತೆ ಇರುವುದು. ನಿದ್ರೆಇಲ್ಲದೆ ನರಳಾಡುವುದು, ಹಸಿವಿದ್ದರೂ ತಿನ್ನಲು ಕಷ್ಟಪಡುವುದು. ಇದೆಲ್ಲ ಡಿಪ್ರೆಷನ್ ಲಕ್ಷಣ.
ಕಡಿಮೆ ಆತ್ಮವಿಶ್ವಾಸ ಮತ್ತು ನಕಾರಾತ್ಮಕ ಆಲೋಚನೆಗಳು (Low Self-Esteem and Negative Thoughts):
ತಮ್ಮನ್ನು ತಾವು “ಕೆಟ್ಟವನು”, “ಯಾರಿಗೂ ಬೇಕಾಗಿಲ್ಲ” ಎಂದು ಹೇಳಬಹುದು. ಕೆಲವು ಮಕ್ಕಳು ಆತ್ಮಹತ್ಯೆ ಯ ಬಗ್ಗೆ ಮಾತನಾಡುವುದು ಕೂಡ ಕಾಣಬಹುದು – ಇದು ತಕ್ಷಣ ಗಮನಿಸಬೇಕಾದ ಅತಿ ಗಂಭೀರ ಲಕ್ಷಣ.
ದೈಹಿಕ ತೊಂದರೆಗಳು – ತಲೆ ನೋವು, ಹೊಟ್ಟೆ ನೋವು (Physical Complaints Without Medical Cause):
ಅವರು ನಿತ್ಯ ತಲೆ ನೋವು, ಹೊಟ್ಟೆ ನೋವು ಎಂದು ಹೇಳಬಹುದು, ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಯಾವುದೇ ಸ್ಪಷ್ಟ ಕಾರಣ ಸಿಗದು. ಇದು ಮಾನಸಿಕ ತೊಂದರೆಯ ಒಂದು ಸೂಚನೆಯಾಗಿರಬಹುದು.
ಮಕ್ಕಳಲ್ಲಿ ಡಿಪ್ರೆಷನ್ ಇರುವುದು ಅಸಾಧ್ಯವಲ್ಲ. ಮಕ್ಕಳ ಭಾವನೆಗಳನ್ನು ತಕ್ಷಣ ಅರ್ಥಮಾಡಿಕೊಳ್ಳುವುದು ಕಷ್ಟವಾಗಬಹುದು, ಆದರೆ ಅವರ ನಡವಳಿಕೆಯಲ್ಲಿ ಹಠಾತ್ ಬದಲಾವಣೆಗಳಾದಾಗ ಗಂಭೀರವಾಗಿ ಗಮನಿಸಬೇಕು. ಪ್ರಾಮಾಣಿಕ ಸಂಭಾಷಣೆ, ಹೆತ್ತವರ ಬೆಂಬಲ ಮತ್ತು ತಜ್ಞರ ಸಲಹೆಯಿಂದ ಮಕ್ಕಳನ್ನು ಈ ಪರಿಸ್ಥಿತಿಯಿಂದ ಹೊರತೆಗೆದುಕೊಳ್ಳಬಹುದು.
ಮಕ್ಕಳು ದೊಡ್ಡವರಂತೆ “ನಾನು ಡಿಪ್ರೆಶನ್ ನಲ್ಲಿ ಇದ್ದೇನೆ” ಎಂದು ಹೇಳುವುದಿಲ್ಲ. ನಾವು ಅವರ ಹೃದಯದ ಮಾತು ಕೇಳುವುದೇ ಮುಖ್ಯ.